HNY-IMAGE2

Longitudes converge at the poles. Here you see the Greenwich meridian (0° longitude) and the Antimeridian (180° longitude) are opposite to each other.

“ಈ ಅಕ್ಷಾಂಶ ಮತ್ತು ರೇಖಾಂಶಗಳಿವೆಯಲ್ಲಾ, ಅದರಷ್ಟು ತೂಕಡಿಕೆ ಬರಿಸುವಂಥ ವಿಷಯ ಉಂಟೇನ್ರೀ, ಮಾರಾಯ್ರೇ?”
ಕ್ಲಾಸಿನಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳ ತಲೆನೋವು ಅತಿ ಹೆಚ್ಚು!

ಹಾಳಾದ್ದು ಉಪಾಧ್ಯಾಯರಿಗೇ ನಿದ್ರೆ ಬರಿಸುತ್ತೆ. ತಲೆ ನೋವೂ ಕೂಡ ಬರಿಸುತ್ತೆ.

ಮಕ್ಕಳಿಗೆ ಸಾಮಾನ್ಯವಾಗಿ ನಾವು ಇವುಗಳ ಬಗ್ಗೆ ಹೇಳಿಕೊಡುವಾಗ, ಘಂಟಾ-ಘೋಷವಾಗಿ, “ಇವು ಭೂಮಿಯ ಮೇಲಿನ ಕಾಲ್ಪನಿಕ ಗೆರೆಗಳು! ಅಕ್ಷಾಂಶಗಳು ಅಡ್ಡ ಗೆರೆಗಳು, ರೇಖಾಂಶಗಳು … ಲೋ ಶ್ರೀನಿವಾಸ, ಮಾತಾಡ್ಬೇಡಾ, ಸುಮ್ನೆ ಕೂತ್ಕೊ … ನೀನೂ ಅಷ್ಟೇನೆ, ಕೋಮಲವಲ್ಲೀ … ಎಷ್ಟು ಸಲಾ ಹೇಳೋದು?… ರೇಖಾಂಶಗಳು ಉದ್ದನೆಯ ಗೆರೆಗಳು …”

ಕಾಲ್ಪನಿಕ ಗೆರೆ?? ಸಮಭಾಜಕ ವೃತ್ತ, ಎಕ್ವಾದೊರ್ (ದಕ್ಷಿಣ ಅಮೆರಿಕ) (ಮೂಲ https://goo.gl/rKfL1s)

ಶ್ರೀನಿವಾಸ, ಕೋಮಲವಲ್ಲಿ, ಮತ್ತು ಅವರ ೮೮ ಸಹಪಾಠಿಗಳಿಗೆ ಈ ತಲೆನೋವನ್ನ ಕಟ್ಟಿಕೊಂಡು ಏನಾಗಬೇಕು?

ಹೋದರೆ ಹೋಗಲಿ, ಇದರಲ್ಲೇನಾದ್ರೂ ಒಂದು ಕಥೆನಾದ್ರೂ ಇದ್ಯಾ ಸರ್ (ಅಥವಾ ಮೇಡಂ)? ಆ ಪುಟ್ಟ ಮನಸ್ಸುಗಳಲ್ಲಿರುವ ಕುತೂಹಲದ ವಧೆ ಪುನಃ ಆ ಕ್ಲಾಸಿನಲ್ಲಿ ಆಗಲಿದೆ! ಹೀಗೇ ಆಗಿ ಆಗಿ, ಆ ಉತ್ಸಾಹಭರಿತವಾದ ಎಳೆ ಮನಸ್ಸುಗಳಲ್ಲಿ ಜಾಡ್ಯ ತುಂಬಿಕೊಂಡುಬಿಡುವ ಅಪಾಯ ಹೆಚ್ಚಾಗುತ್ತದೆ.

ಭೂಗೋಳಶಾಸ್ತ್ರದ ಪಾಠ ಹೇಳಿಕೊಡುವುದು ಕಠಿಣವೇ ಹೌದು. ಆದರೆ, ಸ್ವಲ್ಪ ಶ್ರಮ ಪಟ್ಟರೆ, ಮನರಂಜಕವಾಗಿಯೂ, ಗಂಭೀರವಾಗಿಯೂ, ತಿಳಿಯಾಗಿಯೂ ಹೇಳಿಕೊಡಲು ಸಾಧ್ಯ.

ಈ ವಿಷಯಗಳನ್ನ ಸ್ವಾರಸ್ಯಕರವಾಗಿ ಹೇಳಿಕೊಡಲು ನಾನು ಉಪಯೋಗಿಸುವ ವಿಧಾನಗಳಲ್ಲಿ, ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

 

ಸಮಭಾಜಕ ವೃತ್ತವನ್ನು ದಾಟಲಿರುವ ಪುಟ್ಟ ಹೆಜ್ಜೆ

ಈ ವಿಧಾನಗಳು ಎಲ್ಲೆಲ್ಲಿಯೂ ಸಮಂಜಸವೆಂದು ಹೇಳಲಾಗದು. ನಿಮ್ಮ ವಿದ್ಯಾರ್ಥಿಗಳ ಸಾಮರ್ಥ್ಯ, ನಿಮ್ಮ ಶಾಲೆಯ ಶೈಕ್ಷಣಿಕ ವಾತಾವರಣ ಇತ್ಯಾದಿಗಳನ್ನಿ ಎಲ್ಲರಿಗಿಂತ ಚೆನ್ನಾಗಿ ನೀವೇ ಬಲ್ಲಿರಿ. ನಿಮಗೆ ಹೊಂದುವಂತೆ ಈ ಯೋಚನೆಗಳನ್ನು ಅಳವಡಿಸಿಕೊಳ್ಳಿ.

ಈ ವಿಷಯದ ಬಗ್ಗೆ ಚಿಕ್ಕ ಕೈಪಿಡಿಯೊಂದನ್ನು ಬರೆಯಲು ಹೊರಟಿದ್ದೇನೆ.

ಅದು ತಯಾರಾದಾಗ ಹಂಚಿಕೊಳ್ಳುತ್ತೇನೆ. ಸದ್ಯಕ್ಕೆ ಒಂದೇ ಒಂದು ಅಂಶವನ್ನ ಇಲ್ಲಿ ಒಂದು ಪ್ರಶ್ನೆಯ ಮೂಲಕ ವಿವರಿಸುತ್ತೇನೆ.

 

“ಅಕ್ಷಾಂಶಗಳು ಮತ್ತು ರೇಖಾಂಶಗಳು ಏಕೆ ಬೇಕು?”

ಆಟದ ಮೈದಾನದಿಂದ … (https://goo.gl/FCbbzs)

ಒಂದು ಆಟದ ಮೈದಾನಕ್ಕೆ ಮಕ್ಕಳನ್ನು ಕರೆದೊಯ್ಯಿರಿ. ಅಲ್ಲಿ, ತಂಡಗಳನ್ನು ನಿರ್ಮಿಸಿ, ಒಂದೊಂದು ತಂಡಕ್ಕೂ ಬಯಲಲ್ಲಿ ಆಡುವ ಒಂದೊಂದು ಆಟವನ್ನು ಆಡಲು ಹೇಳಿ. (ನಾಲ್ಕಾರು ಟೆನ್ನಿಸ್ ಚಂಡುಗನ್ನೂ ಬೇಕಾದರೆ ಒದಗಿಸಿ.)

ಬಯಲಲ್ಲಿ ಆಡುವ ಯಾವುದೇ ಆಟವಾಗಲಿ, ಮಕ್ಕಳು ಗೆರೆಗಳನ್ನು ಎಳೆದು, ಬೇರೆ ಬೇರೆ ರೀತಿಯ ಎಲ್ಲೆಗಳನ್ನು ಸ್ಥಾಪಿಸುತ್ತಾರೆ. ಆಯಾ ಆಟಕ್ಕೆ ತಕ್ಕಂತೆ, ಆ ಎಲ್ಲೆಗಳೊಳಗೆ ವಿಧವಿಧವಾದ ನಿಯಮಗಳಿರುತ್ತವೆ.  ಈ ಗೆರೆಗಳನ್ನೂ, ಎಲ್ಲೆಗಳನ್ನೂ ಮತ್ತು ನಿಯಮಗಳನ್ನೂ ಸ್ಥಾಪಿಸಿದ ಕೂಡಲೆ ಆಟ ಆಡಲು ಪ್ರಾರಂಭಿಸಬಹುದು.

ಅಲ್ಲದೆ ಆ ಮೂರೂ ವಿಷಯಗಳಲ್ಲಿ ಎಲ್ಲರಲ್ಲೂ ಐಕ್ಯಮತ (ಅಂದರೆ ಒಪ್ಪಿಗೆ) ಇರಬೇಕು. ಇವೆಲ್ಲ ಕೂಡಿ ಬರದಿದ್ದರೆ, ಆಟ ಇಲ್ಲ. ಗೊಂದಲ ಅಷ್ಟೆ. ವ್ಯವಸ್ಥೆ ಇದ್ದರೇನೇ ಆಟ ಸಾಧ್ಯ, ಪ್ರತಿಯೊಬ್ಬರಲ್ಲೂ ಆ ತಂಡದ ಆಟದಲ್ಲಿ ಏನು ನಡೆಯುತ್ತಿದೆ ಎಂಬುದರ ಸೂಕ್ಶ್ಮವಾದ ಮತ್ತು ವಿಸ್ತಾರವಾದ ತಿಳಿವಳಿಕೆ ಮೂಡುವುದು.

ಹೀಗಾಗಿ ಯಾವುದೇ ಆಟ ತೆಗೆದುಕೊಳ್ಳಿ, ಅದರ ಭಾಷೆಯಲ್ಲಿ ಮಾತನಾಡುತ್ತೇವೆ. ಗೋಲ್, ರನ್, ಔಟ್, ಮೋಸ ಇತ್ಯಾದಿ. ಆ ತಂಡದಲ್ಲಿ ಈ ಭಾಷೆಯನ್ನು ಎಲ್ಲರೂ ಬಲ್ಲರು. ಆಟ ಸುಗಮ.

ಒಮ್ಮೊಮ್ಮೆ ಕಲಹ … ನೀನು ಕಾಲನ್ನ ಇಲ್ಲಿಟ್ಟಿ, ನಾನು ಚೆಂಡನ್ನು ಇಲ್ಲಿಗೆ ತಗುಲಿಸಿದೆ, ನೀನು ಹಾಗೆ ಹೋದಿ ಅದು ತಪ್ಪು, ಇತ್ಯಾದಿ.

ಅಂತೆಯೇ, ಭೂಮಿಯ ಮೇಲೆ ಏನೇನು ಎಲ್ಲಿದೆ, ಅದರ ವ್ಯಾಪ್ತಿ ಏನು, ಎಷ್ಟಿವೆ, ಹೇಗೆ ವಿತರಣೆಯಾಗಿದೆ, ಏಕೆ ಅಲ್ಲಿದೆ, ಅದು ಅಲ್ಲಿರುವುದರ ಪರಿಣಾಮ ಏನು,

ಕಾಲ್ಪನಿಕ ಗೆರೆ?? ಗ್ರೆನಿಚ್ ರೇಖಾಂಶ, ಗ್ರೆನಿಚ್, ಯು.ಕೆ. (ಮೂಲ https://goo.gl/341hyg)

ಅದನ್ನು ನಾವೇನಾದರೂ ಬದಲಾಯಿಸಿದರೆ ಏನಾಗುಬಹುದು, ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸ ಬೇಕಾದರೆ, ಅದಕ್ಕೂ ಇಂತಹ ಗೆರೆ, ಎಲ್ಲೆ, ನಿಯಮಗಳು ಸಾಮಾನ್ಯವಾಗಿ ಒಪ್ಪಿರುವಂತಹ ಒಂದು ವ್ಯವಸ್ಥೆ ಬೇಕಲ್ಲವೆ?

ಈ ಪ್ರಶ್ನೆಗಳನ್ನು ಕೇಳುವ “ಸಬ್ಜೆಕ್ಟು” ಭೂಗೋಳಶಾಸ್ತ್ರ.

ಈ ಆಟಗಳ ತರಹವೇ, ನಾನಾ ಶತಮಾನಗಳ ಪ್ರಯತ್ನದ ಮೂಲಕ ಭೂಮಿಯ ಮೇಲೂ ಒಂದು ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಅಕ್ಷಾಂಶಗಳೂ ರೇಖಾಂಶಗಳೂ ವಿಶ್ವದ ವ್ಯವಹಾರಕ್ಕೆ ಬೇಕಾದ ವ್ಯವಸ್ಥೆಯನ್ನು ಒದಗಿಸಿಕೊಡುತ್ತವೆ.

ಈ ವ್ಯವಸ್ಥೆ ಬಹಳ ವಿಶೇಷವಾದದ್ದು. ಕಾರಣ, ಭೂಮಿ ಅತಿ ದೊಡ್ಡದು ಮತ್ತು ಗೋಲಾಕಾರದ್ದು. (ಇವುಗಳ ಸ್ವಾರಸ್ಯಗಳನ್ನು ನಾನಿಲ್ಲಿ ವಿಸ್ತರಿಸುವುದಿಲ್ಲ)

ಈ ಒಂದು ಚಿಕ್ಕ ಚಟುವಟಿಕೆಯ ಮೂಲಕ ಇಷ್ಟು ಮಟ್ಟಕ್ಕೆ ಮಕ್ಕಳಲ್ಲಿ ಅರಿವು ಮೂಡಿಸಬಹುದು.

 

 

 

 

ಮುಂದೆ ಯೋಚಿಸಿ:

ಗೂಗಲ್ ಅರ್ತ್-ನಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳು

  • ನಮ್ಮ ನಾಡಿನ ಗಡಿ (ಎಲ್ಲೆ) ಎಲ್ಲಿದೆ?
  • ನಮ್ಮ ರಾಜ್ಯದ ಗಡಿ ಎಲ್ಲಿದೆ?
  • ಮುಂಗಾರು ಮಳೆಯೂ ಹಿಂಗಾರು ಮಳೆಯೂ ಹೇಗೆ ಉತ್ಪತ್ತಿಯಾಗುತ್ತವೆ, ಯಾವಾಗ, ಎಲ್ಲಿ ಬರುತ್ತವೆ?
  • ಎಲ್ಲಿ ಏನನ್ನು ಬೆಳೆಯಬಹುದು, ಯಾವಾಗ ಬೆಳೆಯಬಹುದು, ಏಕೆ ಅಲ್ಲಿ ಬೆಳೆಯಬಹುದು?
  • ನಮ್ಮ ನಾಡಿನ ಋತುಗಳಿಗೂ, ವ್ಯವಸಾಯ ಪಧ್ಧತಿಗಳಿಗೂ, ಆಹಾರ ವ್ಯತ್ಯಾಸಗಳಿಗೂ, ಉಡುಗೆ ತೊಡುಗೆಗಳಿಗೂ, ಹಬ್ಬಗಳಿಗೂ, ನಂಬಿಕೆಗಳಿಗೂ, ಗಾದೆ-ನಾಣ್ಣುಡಿಗಳಿಗೂ, ಕಲೆ ಸಂಸ್ಕೃತಿಗಳಿಗೂ ಅಕ್ಷಾಂಶ ಮತ್ತು ರೇಖಾಂಶಗಳ ಮುಖ್ಯತ್ವ ಏನು?
  • ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಾಗುತ್ತಿರುವ ಯುಧ್ಧದಲ್ಲಿಯೂ, ಒಸಾಮಾ ಬಿನ್ ಲಾಡನ್-ಅನ್ನು ಪತ್ತೆ ಹಚ್ಚಿ ಕೊಂದ ಘಟನೆಯಲ್ಲೂ ಅಕ್ಷಾಂಶ ಮತ್ತು ರೇಖಾಂಶಗಳು ಅತಿ ಮುಖ್ಯವಾದ ಪಾತ್ರ ವಹಿಸಿವೆ … ಅದು ಹೇಗೆ?

ಈ ಪ್ರಶ್ನೆಗಳನ್ನೂ ಮತ್ತು ಇವಕ್ಕೆ ಸಂಬಂಧಿಸಿದ ಅನೇಕ ಬೇರೆ ಪ್ರಶ್ನೆಗಳನ್ನೂ ಉತ್ತರಿಸ ಬೇಕಾದರೆ ಅಕ್ಷಾಂಶ ಮತ್ತು ರೇಖಾಂಶಗಳ ಜ್ಞಾನ ಅತ್ಯವಶ್ಯಕ.

(ಇವುಗಳ ಬಗ್ಗೆ ಎರಡು ದಿನದ ವಿಸ್ತಾರವಾದ ಕಾರ್ಯಾಗಾರವನ್ನು ನಡೆಸಿ ಸಮಾಲೋಚನೆ ಮಾಡಿ ನಿಮ್ಮ ನಿಮ್ಮ ತರಗತಿಗಳಲ್ಲಿ ಭೂಗೋಳಶಾಸ್ತ್ರದ ಬಹಳ ಮುಖ್ಯವಾದ

ಹಾಗೂ ತಳಹದಿಯಾದ ಈ ವಿಷಯವನ್ನು ಹೇಗೆ ಸಮಂಜಸವಾಗಿ ಹೇಳಿಕೊಡಬಹುದದು ಎಂಬುನ್ನು ತಿಳಿಯಲು ಈ ಸಂಸ್ಥೆಯೊಡನೆ ಸಂಪರ್ಕಿಸಿರಿ.)

Categories:

No responses yet

Share your thoughts

%d bloggers like this: