ಈಚೆಗೆ ಒಂದು ದಿನ ನನ್ನನ್ನ ಯಾರೋ ಕೇಳಿದರು, “ರೀ, ನೀವು ಪಠ್ಯ ಪುಸ್ತಕಕ್ ಸಂಬಂಧ್ ಪಟ್-ಹಾಂಗ ನಿಮ್ಮ ಬ್ಲಾಗ ಯಾಕ್ ಬರಿಯಲ್ರಿ?”

ನಾನು ನಾನಾ ವಿಷಯಗಳಿಗೆ ಸಂಬಂಧ ಪಟ್ಟಂತೆ ಬ್ಲಾಗ್ ಬರೀತೀನಿ. ಪಠ್ಯ ಪುಸ್ತಕಕ್ಕೆ ಸಂಬಂಧವಿಲ್ಲದ ಬ್ಲಾಗ್ ಬರೆದು ಭೂಗೋಳಶಾಸ್ತ್ರದಲ್ಲಿ ಮೊದಲು ಕುತೂಹಲ ಹುಟ್ಟಿಸುವುದು ನನ್ನ ಗುರಿ. ಕುತೂಹಲ ಕೆರಳಿಸುವುದಕ್ಕೆ ಅದೆಷ್ಟು ಕಥೆಗಳಿವೆ!  ಕುತೂಹಲವನ್ನ ಕೆರಳಿಸಿದ ಮೇಲೆ ಪಠ್ಯಪುಸ್ತಕಕ್ಕೆ ಹೋಗುತ್ತೇನೆ.

ಈ ವಿಷಯದಲ್ಲಿ ಬೆಂಗಳೂರಿನ ನ್ಯಾಶನಲ್ ಹೈ ಸ್ಕೂಲಿನಲ್ಲಿ ನನಗೆ ಭೂಗೋಳಶಾಸ್ತ್ರದ ಗುರುಗಳಾದ ಶ್ರೀ ನರಸಣ್ಣನವರೇ ನನಗೆ ಮಾದರಿ.

ಅವರಿಗೂ ಮಕ್ಕಳಾದ ನಮ್ಮಂತೆಯೇ ಪಠ್ಯಪುಸ್ತಕಗತವಾದ ಭೂಗೋಳಶಾಸ್ತ್ರ ಅತಿ ಸಪ್ಪೆಯೆನಿಸುತ್ತಿತ್ತು. ಕ್ಲಾಸಿಗೆ ಬಂದವರೆ, ಸರಸರನೆ ಓದಿ, ನಾನಾ ಭಾಗಗಳನ್ನ “ಅಂಡರ್ಲೈನ್” ಮಾಡಿಸಿ, ಆ ಪಠ್ಯಪುಸ್ತಕವನ್ನ ಬದಿಗಿಡಿಸಿಬಿಟ್ಟು, ಕಥೆಗಳ ಮೂಲಕ ಸ್ವಾರಸ್ಯವಾದ ಭೂಗೋಳಶಾಸ್ತ್ರದ ಮತ್ತು ಚರಿತ್ರೆಯ ವಿಷಯಗಳನ್ನು ಬೋಧಿಸುತ್ತಿದ್ದರು. ಅಂದಂದಿನ ವಾರ್ತಾ ಪತ್ರಿಕೆಗಳಲ್ಲಿದ್ದ ವಿಷಯಗಳನ್ನು ಹೇರಳವಾಗಿ ಬಳಸುತ್ತಿದ್ದರು. ನಾವು ಓದಿದ್ದು ಇಂಗ್ಲೀಶ್ ಮೀಡಿಯಂ ಆದರೂ ಅವರ ಪಾಠಗಳನ್ನು ಹೆಚ್ಚು ಪಾಲಿಗೆ ನಾವು, ಬಾಲಕರು, ಮಾತಾಡುತ್ತಿದ್ದ ಕನ್ನಡದಲ್ಲೇ ನಡೆಸುತ್ತಿದ್ದರು.

ನಗಿಸಿ ನಗಿಸಿ, ನಲಿಸಿ ನಲಿಸಿ ಕಲಿಸುವ ವಿಧಾನ ಅವರದು.

ಶ್ರೀ ಬಿ. ನರಸಣ್ಣ, ಎಮ್.ಎ., ಎಮ್.ಎಡ್. (೧೯೨೦ – ೧೯೮೭)

ಈಗಲೂ ಚೆನ್ನಾಗಿ ನೆನಪಿದೆ ನನಗೆ.

೧೯೭೧. ಡಿಸೆಂಬರ್ ೪ನೆಯ ತಾರಿಕು. ಶನಿವಾರ ಬೆಳಿಗ್ಗೆ ಸ್ಕೂಲು. ಅರ್ಧ ದಿನ. ಎರಡನೆಯ ಪೀರಿಯಡ್.

ನರಸಣ್ಣನವರು ಕ್ಲಾಸಿಗೆ ಬಂದರು. ಆಗಿನ್ನೂ ನಾನು ಹೈ ಸ್ಕೂಲ್ ಸೇರಿ ಆರು ತಿಂಗಳಾಗಿತ್ತಷ್ಟೇ. ಆಷ್ಟರಲ್ಲಿ ಅವರು ನಮ್ಮ ಮನಸ್ಸನ್ನು ಚೆನ್ನಾಗಿಯೇ ಸೆಳೆದಿದ್ದರು. ಕ್ಲಾಸಿನೊಳಗೆ ಕಾಲಿಟ್ಟವರೆ, “ಇವತ್ತು, ಐದು ನಿಮಿಷ ವರ್ಲ್ಡ್ ನ್ಯೂಸ್” (ಅಂತರ್ರಾಷ್ಟ್ರೀಯ ಸುದ್ದಿಗಳು) ಅಂತ ಘೋಷಿಸಿದರು. ಪಠ್ಯಪುಸ್ತಕ ಅಲ್ಲದಿದ್ದರೆ ಏನಾದರೂ ಮಾಡಲಿ, ನಾವೆಲ್ಲರೂ ತಯಾರು. ಬೇಗ ಬೇಗನೆ ಪುಸ್ತಕಗಳನ್ನ ಮುಚ್ಚಿ ಬದಿಗಿಟ್ಟು ಕಿವಿ ಕಣ್ಣು ತೆರೆದು ಬಾಯಿ ಮುಚ್ಚಿ ಅವರನ್ನೇ ನೋಡುತ್ತಾ ಕುಳಿತೆವು. ೮೦ ಹುಡುಗರು.

ಸುತ್ತ-ಮುತ್ತ ನೋಡಿದರು. ಒಂತು ಮ್ಯಾಪ್ (ನಕ್ಷೆ) ಗತಿಯಿಲ್ಲ! ಹಾಗಿದ್ದರೂತಾನೆ ೮೦ ಜನ ಮಕ್ಕಳಿಗೆ ತಿಳಿಯಾಗಿ ಹೇಗೆ ಕಾಣಿಸೀತು? ಚಿಂತೆಯಿಲ್ಲ! ನರಸಣ್ಣನವರು ಬೋರ್ಡಿಗೆ ಹೋದರು, ಸರಸರ ಅಳಿಸಿದರು. ಒಂದು ತುಂಡು ಚಾಕ್ ಪೀಸು ತೆಗೆದುಕೊಂಡರು. ಮನೋವೇಗದಲ್ಲಿ ಪ್ರಪಂಚದ ಖಂಡಗಳ ನಕ್ಷೆಯನ್ನ ಸುಂದರವಾಗಿ ಬರೆದರು. ನಾವೆಲ್ಲರೂ “ಆ” ಅಂತ ಬಾಯಿ ಬಿಟ್ಟುಕೊಂಡು ಆಶ್ಚರ್ಯದಿಂದ ನೋಡಿದೆವು. ಕ್ಲಾಸೆಲ್ಲಾ ನಿಃಶಬ್ದ!

ಹಿಂದಿನ ಸಂಜೆ, ಪಾಕಿಸ್ತಾನಕ್ಕೂ ಭಾರತಕ್ಕೂ ನಡುವೆ ಯುಧ್ಧ ಪ್ರಾರಂಭವಾಗಿತ್ತು. ಅದರ ಆಗುಹೋಗುಗಳನ್ನ ವರ್ಣಿಸ ತೊಡಗಿದರು ನರಸಣ್ಣನವರು. ಪಾತ್ರಧಾರಿಗಳ ವ್ಯಂಗ್ಯ ಮುಖಚಿತ್ರಗಳನ್ನು ಬರೆದರು. ಪ್ರತಿಯೊಬ್ಬ ಪಾತ್ರಧಾರಿಯ ಡಯಲಾಗ್-ಗಳನ್ನ ಮಕ್ಕಳಾಡುವ ಕನ್ನಡದಲ್ಲಿ ನುಡಿದರು.

ಇಂದಿರಾ ಗಾಂಧಿ ಮತ್ತು ರಿಚರ್ಡ್ ನಿಕ್ಸನ್, ಉದ್ದ ಮೂಗುಗಳನ್ನ ಮುಟ್ಟುವಂತೆ … ಒಬ್ಬರೊನ್ನೊಬ್ಬರು ನೋಡಿ ಶಿಡುಕುತ್ತಿದ್ದರು. [ಪೂರ್ವ ಪಾಕಿಸ್ತಾನಕ್ಕೆ ಪಶ್ಚಿಮ ಪಾಕಿಸ್ತಾನದ ಆಡಳಿತಾಧ್ಯಕ್ಷ] “ಟಿಕ್ಕಾ ಖಾನ್, ಪೀಕಿಂಗ್ [ಈಗ ಬೆಯ್ಜಿಂಗ್] ಗೆ ಹೋಗಿ, ಚೂ ಎನ್ ಲಾಯ್ ಅನ್ನ ನೋಡಿ, ಮುಖ ಎಲ್ಲ ಪರ್ಚಿಕೊಂಡ. ಹಾ  ಹೂ ಅಂತ ಕೂಗಾಡಿ ಕುಣಿದಾಡಿದ… ಚೂ ಓಹೋ ಹಾಗೋ, ಸರಿ, ನೋಡೋಣ ನೀನ್ ಈಗ ಬಿಡು ಗಾಡಿ ಅಂತ ವಾಪಸ್ಸು ಕಳಿಸಿದ …”

“ಐದು ನಿಮಿಷ” ಅಂತ ಶುರುವಾದದ್ದು, ಪೂರ್ತಿ ಪೀರಿಯಡ್ ಆಗಿ, ಹತ್ತು ನಿಮಿಷ ಹೆಚ್ಚಾಗಿಯೇ ಆಗಿತ್ತು.

ಪ್ರತಿದಿನ ಅಂದಿನ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು, ಅವರದೇ ಆದ ಶೈಲಿಯಲ್ಲಿ ವ್ಯಂಗ್ಯ ಮತ್ತು ವ್ಯಾಖ್ಯಾನದೊಂದಿಗೆ ನಮಗೆ ಕಣ್ಣಮುಂದೆ ತಂದು ನಿಲ್ಲಿಸುವರು. ಅದೇ ಡಿಸೆಂಬರ್ ೧೬ರಂದು , ಪೂರ್ವ ಪಾಕಿಸ್ತಾನದ ಸೇನೆ ಸಂಪೂರ್ಣವಾಗಿ ಭಾರತದ ಸೇನೆಗೆ ಶರಣಾಗಿಬಿಟ್ಟಿತು. ಯುಧ್ಧ ಮುಗಿದಿತ್ತು. ಮಾರನೆಯ ದಿನವೇ ಪುನಃ ಪಠ್ಯ ಪುಸ್ತಕವನ್ನ ಕ್ಲಾಸಿನಲ್ಲಿ ತೆರೆದದ್ದು.

ಆ ದಿನಗಳಲ್ಲಿಳು ನನ್ನಲ್ಲಿ ಅನೇಕ ಬದಲಾವಣೆಗಳು ಪ್ರಾರಂಭಿಸಿದುವು. ನಿತ್ಯವೂ ವಾರ್ತಾಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ನಾನು ಅವರ ಈ “ವರ್ಲ್ಡ್ ನ್ಯೂಸ್” ಕ್ಲಾಸುಗಳಿಂದಲೇ ಆರಂಭಿಸಿದ್ದು. ಅಂದಿನ ವಾರ್ತೆಗಳನ್ನು ಭೂಗೋಳಶಾಸ್ತ್ರಕ್ಕೂ ಚರಿತ್ರೆಗೂ ಪೋಣಿಸುವುದನ್ನು ಆಗಲೇ ನಾನು ಮೊದಲ ಬಾರಿಗೆ ಕಲಿತದ್ದು. ಸಮಾಜ ವಿಜ್ಞಾನವನ್ನು ಕಲಿಯಲೂ ಕಲಿಸಲೂ ಕಥೆಗಳು ಎಷ್ಟು ಮುಖ್ಯ ಎಂಬುದನ್ನು ಕಲಿತಿದ್ದೂ ಆಗಲೇ. ಅಂತರ್ರಾಷ್ಟ್ರೀಯ ವ್ಯವಹಾರಗಳಲ್ಲಿ ಕುತೂಹಲ, ಆಸಕ್ತಿ ಹುಟ್ಟಿ ಬೇರೂರಿದ್ದೂ ಆಗಲೇ. ಎಂದೋ ಒಂದು ದಿನ ನಾನೂ ಉಪಾಧ್ಯಾಯನಾಗ ಬೇಕು ಎಂಬ ಯೋಚನೆಯೂ ಆಗಲೇ ಮನಸ್ಸಿನಲ್ಲಿ ಎಲ್ಲೋ ಹುಟ್ಟಿಕೊಂಡಿದ್ದು.

ಆದರೆ ಅವು ನನಗೆ ತಿಳಿಯಾಗಿ ಗೋಚರವಾಗಲು ಪ್ರಾರಂಭವಾದದ್ದು, ಸುಮಾರು ೩೦ ವರ್ಷಗಳನಂತರವೇ!

ಈಗ ಭೂಗೋಳಶಾಸ್ತ್ರದಲ್ಲೊ ಅದಕ್ಕೆ ಸಂಬಂಧಪಟ್ಟ ವಿಷಯಗಳಲ್ಲೊ ಮಕ್ಕಳಿಗೂ ಸಹೃದಯರಾದ ಉಪಾಧ್ಯಾಯರಿಗೂ ಇತರರಿಗೂ ನಾನು ಕಾರ್ಯಾಗಾರಗಳನ್ನ ಉಪನ್ಯಾಸಗಳನ್ನ  ಹಾಗೂ ತರಬೇತಿಗಳನ್ನ ನಡೆಸುವಾಗ ಯಾವುದೋ ಒಂದು ಘಟ್ಟ ದಾಟಿದ ಕೂಡಲೆ ನನ್ನ ಗುರುಗಳ ಸೌಮ್ಯವಾದ ಅನುಗ್ರಹ ಅತಿ ತಿಳಿಯಾಗಿ ಮನದಟ್ಟುತ್ತದೆ.

ಅನಂತರ ಆ ಕಾರ್ಯಕ್ರಮ ಅವರದೇ. ಚೆನ್ನಾಗಿದ್ದರೂ ಅವರದೇ, ಇಲ್ಲದಿದ್ದರೂ ಅವರದೇ.

ಹಾಂ! ಅವರು ಬಿಡಿಸುತ್ತಿದ್ದರಲ್ಲ ಪ್ರಪಂಚದ ಖಂಡಗಳ ನಕ್ಷೆ? ಎರಡನೆಯ ದಿನದಿಂದ ಕೈಗಡಿಯಾರ ನಾವು ಕೈಯಲ್ಲಿ ಇಟ್ಟುಕೊಂಡು ಎಷ್ಟು ಹೊತ್ತಾಗತ್ತೆ ಆ ನಕ್ಷ್ಯೆಯನ್ನ ಅವರು ಬಿಡಿಸಲು ಅಂತ ನೋಡುತ್ತಿದ್ದೆವು.

ಅವರ ದಾಖಲೆ?

ಒಂದು ನಿಮಿಷ ನಲವತ್ತು ಸೆಕಂಡುಗಳು!

ತ್ಯಾಗರಾಜರು ರಾಮನನ್ನು ಕೇಳುತ್ತಾರೆ, “ದಾಶರಥೆ! ನೀ ಋಣಮು ತೀರ್ಪ ತರಮಾ?” ಎಂದು. (“ದಾಶರಥೆ! ನಿನ್ನ ಋಣವನ್ನು ತೀರಿಸಲು ಸಾಧ್ಯವೇ?”)

ಇದೇ ಪ್ರಶ್ನೆಯನ್ನ ನಮ್ಮ ಪ್ರತಿಯೊಬ್ಬ ಗುರುವನ್ನೂ ನಾವು ಕೇಳಬಹುದಲ್ಲವೆ?

(ಮುಂದಿನ ಬಾರಿ ನನ್ನ ಇನ್ನೊಬ್ಬ ಭೂಗೋಳಶಾಸ್ತ್ರದ ಗುರುಗಳ ಪರಿಚಯ ಮಾಡಿಕೊಡುತ್ತೇನೆ.)

 

Categories:

One response

  1. Fantastic Chandra! What a trip to good old NHS and Sri BN!!! Keep writing,

    Cheers,

    Phani

Share your thoughts

Discover more from The Institute of Geographical Studies

Subscribe now to keep reading and get access to the full archive.

Continue reading