“ಗುರು” ಅನ್ನಿಸಿಕೊಳ್ಳುವವರು ಬರೀ ಪಠ್ಯ ವಸ್ತುಗಳನ್ನು ಕಲಿಸಿಕೊಡುವವರು ಮಾತ್ರವಲ್ಲ, ಜೀವನ ಕಲೆ ಮತ್ತು ಅದಕ್ಕೆ ಬೇಕಾದ ನಾನಾ ಕುಶಲತೆಗಳು, ಮನೋ ಪ್ರವೃತ್ತಿಗಳು, ಮಾನವೀಯತೆ ಬೆಳೆಯುವಂತಹ ರೀತಿನೀತಿಗಳು … ಇವೆಲ್ಲವನ್ನೂ ಸಮಗ್ರವಾಗಿಯೂ ಸಮನ್ವಯವಾಗಿಯೂ ನಮಗೆ ದಾನ ಮಾಡುತ್ತಾರೆ. ಭಾರತದಲ್ಲಿ ಸೆಪ್ಟೆಂಬರ್ ೫ನೆಯ ತಾರೀಕನ್ನು “ಶಿಕ್ಷಕರ ದಿನಾಚರಣೆ” ಎಂದು ಕೊಂಡಾಡುತ್ತೇವೆ. ಅಲ್ಲದೆ, “ಗುರು ಪೂರ್ಣಿಮಾ” ಎಂದು ಮತ್ತೊಂದು ದಿನವೂ ಕೊಂಡಾಡುತ್ತೇವೆ. ಆದರೆ ಗುರುಗಳನ್ನು ನೆನೆಯುವುದಕ್ಕೆ ದಿನವೇನು ಮುಹೂರ್ತವೇನು?
ಇಂದು, ನನ್ನ ಮತ್ತೊಬ್ಬ ಭೂಗೋಳಶಾಸ್ತ್ರದ ಗುರುಗಳಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಡಾ|| ಸುರೀಂದರ್ ಮೋಹನ್ ಭಾರದ್ವಾಜ್. ಅಮೇರಿಕದ ಒಹಾಯೊ ರಾಜ್ಯದಲ್ಲಿರುವ, ಕೆಂಟ್ ಸ್ಟೇಟ್ ಯೂನಿವೆರ್ಸಿಟಿಯಲ್ಲಿ ನನ್ನ ಗುರುಗಳು.
೧೯೮೬ನೆ ಇಸವಿಯಲ್ಲಿ ಅವರ ಶಿಷ್ಯನಾದೆ.
ಅವರ ಬಳಿ ನಾನು ತೆಗೆದಕೊಂಡ “ಕೋರ್ಸ್” ಒಂದೇ ಒಂದು ಸೆಮೆಸ್ಟೆರ್ ಕಾಲ. ಆದರೆ, ಅವರಿಂದ ಕಲಿಯುವುದು ಇನ್ನೂ ಮುಗಿದಿಲ್ಲ.
ಭೂಗೋಳಶಾಸ್ತ್ರವನ್ನ — ಬರೀ ಜೀವನೋಪಾಯಕ್ಕೆ ಮಾತ್ರವಲ್ಲ — ಜೀವನಕ್ಕೆ ನೆರವಾಗುವಂತೆ ಉಪಯೋಗಿಸುವುದು ಹೇಗೆ ಅನ್ನುವುದೇ ಅವರು ನನಗೆ ಕೊಟ್ಟ ಅತಿ ದೊಡ್ಡ ವರ.
ಒಮ್ಮೆ ನಾನು ಯಾವುದೋ ಕಾರಣದಿಂದ ಬಹಳ ಮನಸ್ಸು ಕುಗ್ಗಿ ತುಂಬಾ ಚಿಂತಾಕ್ರಾಂತನಾಗಿದ್ದೆ. ಗುರುವು ನನಗೆ ಹಿತೈಷಿಯಾಗಿ ತನ್ನ ಜೀವನದ ಅನುಭವವನ್ನು ನನ್ನೊಡನೆ ಹಂಚಿಕೊಂಡರು. “ನೋಡು, ನನಗೆ ಕಷ್ಟಗಳ ಒತ್ತಡ ಅತಿಯಾಯಿತು ಅನ್ನಿಸುವಾಗ, ನನ್ನ ಮನಸ್ಸಿನಲ್ಲೇ ಒಂದು ಪ್ರಯಾಣ ಮಾಡುತ್ತೇನೆ. ಮನೆಯಿಂದ ಹೊರಗೆ ಬಂದು ನಿಂತು ನೋಡಿದಂತೆ ಮೊದಲು ಊಹಿಸಿಕೊಳ್ಳುತ್ತೇನೆ. ಅಲ್ಲಿಂದ ಬೀದಿಯ ಕೊನೆಗೆ ಬಂದು ಹಿಂತಿರುಗಿ ನೋಡುತ್ತೇನೆ. ಆಗ ನನ್ನ ಕಷ್ಟ ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ. ಇನ್ನು ಮೇಲಕ್ಕೆ ಹಾರಿ, ಕೆಂಟ್ ನಗರದ ಮಟ್ಟದಿಂದ ನೋಡುತ್ತೇನೆ. ನನ್ನ ಕಷ್ಟ ಇನ್ನೂ ಚಿಕ್ಕದಾಗಿ ಕಾಣುತ್ತದೆ. ಹೀಗೆಯೇ ಹೋಗುತ್ತಾ ಹೋಗುತ್ತಾ, ವಿಶ್ವದ ಮಟ್ಟದಿಂದ ನೋಡಿದಾಗ, ನನ್ನನ್ನು ಕಾಡುತ್ತಿದ್ದ ಕಷ್ಟ ಅತಿ ತುಛ್ಛವಾಗಿಬಿಡುತ್ತದೆ. ಆಗ ನಾನು ಆ ಕಷ್ಟವನ್ನ ಭಯವಿಲ್ಲದೆ ಎದುರಿಸುತ್ತೇನೆ. ಭೂಗೋಳಶಾಸ್ತ್ರವನ್ನು ನಾನು ನನ್ನ ಜೀವನದಲ್ಲಿ ಉಪಯೋಗಿಸುವ ವಿಧಾನಗಳಲ್ಲಿ ಇದೊಂದು.”
ಇಂತಹ ಅನೇಕ ಸಂಭಾಷಣೆಗಳು ಅವರೊಂದಿಗೆ ಆದವು. ಮಾನವೀಯತೆ, ಭೂಗೋಳಶಾಸ್ತ್ರ ಅದಕ್ಕೆ ಹೇಗೆ ನೆರವಾಗಬೇಕು, ನಾನದನ್ನು ಹೇಗೆ ಬಳಸಲು ಪ್ರಯತ್ನಿಸಬಹುದು, ಇವೆಲ್ಲವನ್ನೂ ಆ ಗುರುವು ನನಗೆ ಕಲಿಸಿದರು.
ಭೂಗೋಳಶಾಸ್ತ್ರ ಸಮ್ಮೇಳನಗಳಲ್ಲಿ ಮುಖ್ಯವಾದ ಹಿರಿಯರಾದ ಗಹನವಾದ ಜ್ಞಾನಿಗಳಾದ ಭೂಗೋಳಶಾಸ್ತ್ರಜ್ಞರಿಗೆ ನನ್ನನ್ನು ಪರಿಚಯ ಮಾಡಿಸಿಕೊಡುವರು. ಅದರಿಂದತಾನೆ ಅದೆಷ್ಟು ಕಲಿಕೆ!
ನಮ್ಮ ವೃತ್ತಿಯಲ್ಲಿ ನಾವು ಏಳಿಗೆ ಹೊಂದಬೇಕು ಎಂಬ ಆಶೆ ಎಷ್ಟಿತ್ತು ಅವರಲ್ಲಿ ಎಂದರೆ, ನಾವು ಕೆಲಸಕ್ಕಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ಹುಡುಕುತ್ತಿದ್ದಾಗ ಅವರು ಒಂದು ಶಿಫಾರಿಸು ಕಾಗದ ಬರೆಯಲು ೨-೩ ದಿನ ದುಡಿದು ಆ ಕೆಲಸಕ್ಕೆ, ಆ ಸಂಸ್ಥೆಗೆ ಅತಿ ಸಮಂಜಸವಾದ ಪತ್ರಗಳನ್ನು ಬರೆದು ಕಳುಹಿಸುವರು.
ವಿದ್ಯಾರ್ಥಿಗಳ ಮೇಲೆ ಅಷ್ಟು ಪ್ರೀತಿ. ಅಷ್ಟೇ ಶಿಸ್ತೂ ಕೂಡ.
ಈ ಗುಣಗಳನ್ನು ಆಚರಣೆಯ ಮೂಲಕ ತೋರಿಸಿಕೊಟ್ಟು, ನನ್ನ ಕಲಿಕೆಗೆ ಚಿರಕಾಲವೂ ಗುರುಗಳಾಗಿದ್ದಾರೆ ಡಾ|| ಭಾರದ್ವಾಜರು. ಈಗ ನಾನು ಭೂಗೋಳಶಾಸ್ತ್ರದಲ್ಲಿ ಪಾಠವೋ, ಕಾರ್ಯಾಗಾರವೋ, ತರಬೇತಿಯೋ ಮಾಡುವಾಗ ಗುರು ಯಾರು ಶಿಷ್ಯ ಯಾರು ಅನ್ನುವುದನ್ನು ಎಷ್ಟೋ ಬಾರಿ ತಿಳಿಯದಹಾಗೆ ಆಗುತ್ತದೆ.
ಇದರಲ್ಲಿದೆ ಕಲಿಕೆಯ ಆನಂದ.
ಬೆಂಗಳೂರಿನ ನ್ಯಾಷನಲ್ ಹೈ ಸ್ಕೂಲಿನಲ್ಲಿ, ನನ್ನ ಸಂಸ್ಕೃತ ಉಪಾಧ್ಯಾಯರಾದ ವಿದ್ವಾನ್ ಅಲಸಿಂಗರ ಭಟ್ರಾಚಾರ್ಯರು ಒಮ್ಮೆ ನಿಜವಾದ ಗುರುವಿನ ಲಕ್ಷಣ ಏನೆಂಬುದನ್ನು ಯಾವುದೋ ಕವಿಯ ಪದಗಳಲ್ಲಿ ಹೇಳಿದರು — “ಶಿಷ್ಯಾದಿಛ್ಛೇತ್ ಪರಾಭವಂ” ಅಂದರೆ ಅಂತಹ ಗುರುವು ತನ್ನ ಶಿಷ್ಯನ ಕೈಯಿಂದ ಸೋಲನ್ನು ಬಯಸುತ್ತಾನೆ (ಳೆ ).
ಅಂತಹ ಗುರುಗಳಲ್ಲೊಬ್ಬರು ಡಾ|| ಸುರೀಂದರ್ ಮೋಹನ್ ಭಾರದ್ವಾಜರು.
ಈಗ ನಿವೃತ್ತರಾಗಿದ್ದಾರೆ.
ಆಗಾಗ್ಗೆ ಅವರೊಡನೆ ಫೋನಿನ ಅಥವಾ Skypeನ ಮೂಲಕ ಈಗಲೂ ಮಾತಾಡುತ್ತೇನೆ.
ಹತ್ತು ನಿಮಿಷದ ಸಂಭಾಷಣೆಯಷ್ಟೇ ಸಾಕು.
ಪ್ರಪಂಚವನ್ನೇ ಆಲಂಗಿಸಿಕೊಂಡು, ನೋಡೀ ಭೂಗೋಳಶಾಸ್ತ್ರದ ಸ್ವಾರಸ್ಯವನ್ನ, ಸೊಬಗನ್ನ ಅಂತ ಹೇಳಬೇಕೆನ್ನುವ ಹುಮ್ಮಸ್ಸು, ಚೈತನ್ಯ ಮತ್ತಷ್ಟು ಬಲವಾಗುತ್ತದೆ.
“ಅಜ್ಞಾನವೆಂಬ ಕಗ್ಗತ್ತಲನಿಂದ
ಜ್ಞಾನವೆಂಬ ಅಂಜನ ದೀವಟಿಗೆಯ ಬೆಳಕಿನಿಂದ
ನನ್ನ ಕಣ್ಣನ್ನು ತೆರೆಯಿಸಿದ ಆ ಗುರುವಿಗೆ ನಮಸ್ಕಾರ”
No responses yet