ಸೂರ್ಯನ ಸುತ್ತ ಭೂದೇವಿಯು ಮಾಡುವ ವಾರ್ಷಿಕ ಪ್ರಯಾಣ. ಋತುಗಳು. ಅಕ್ಷಾಂಶಗಳು. ಇವುಗಳಿಗೂ ರಂಜಾನಿಗೂ ಏನು ಸಂಬಂಧ? ಎಲ್ಲೆಲ್ಲೂ ಎಲ್ಲತರಲ್ಲೂ ಭೂಗೋಳಶಾಸ್ತ್ರದ ಪ್ರಭಾವ ಇದ್ದೇ ಇದೆ! ಹೇಗೆ? ಏನು? ಎತ್ತ?

ಮೊದಲು ಈ “ಲಿಂಕ್”ಇಗೆ ಹೋಗಿ.

ಇಲ್ಲಿ “ಶೋ ಅರ್ತ್ ಪ್ರೊಫೈಲ್” (Show Earth Profile) ಬಟನ್ನನ್ನು ಕ್ಲಿಕ್ ಮಾಡಿ. ಆಗ ನಿಮಗೆ ಕಾಣುವುದು, ಮಾರ್ಚ್ ೨೦/೨೧ ತಾರೀಖಿಗೆ, ಭೂಮಿಯ ಸ್ಥಾನ ಎಲ್ಲಿದೆ ಎಂಬುದು.

ಆ ಸ್ಥಾನದಲ್ಲಿ ಸೂರ್ಯನು ಸಮಭಾಜಕ ವೃತ್ತದ ಮೇಲೆ ಜ್ವಲಿಸುತ್ತಿರುತ್ತಾನೆ. ಅಂದರೆ ಅವನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ, ಅಂದರೆ ೯೦° ಕೋನದಲ್ಲಿ ಬೀಳುತ್ತಿವೆ.

ಪ್ರಪಂಚದ ಎಲ್ಲಾ ಜಾಗಗಳಲ್ಲೂ ಹಗಲು ಮತ್ತು ರಾತ್ರಿ ಸಮವಾಗಿರುತ್ತವೆ. ಅಂದರೆ ೧೨ ಘಂಟೆಗಳ ಕಾಲ ಹಗಲು, ಮತ್ತು ೧೨ ಘಂಟೆಗಳ ಕಾಲ ರಾತ್ರಿ.

ಇದು ಮೇಷ ವಿಶುವತ್-ಸಂಕ್ರಾಂತಿ.

ಅತಿ ತೀಕ್ಷ್ಣವಾದ ಸೂರ್ಯಾತಪ (ಅಂದರೆ ಸೂರ್ಯನ ತಾಪ), ಸಮಭಾಜಕ ವೃತ್ತದ ಮೇಲಿರುತ್ತದೆ.

ಕೆಳಗೆ ಇರುವ “ಪ್ಲೇ” ಬಟನ್ನನ್ನು ಒತ್ತಿ. ಭೂಮಿ ಸೂರ್ಯನ ಸುತ್ತ ಚಲಿಸ ತೊಡಗುತ್ತಾಳೆ. ಕೆಳಗೆ ಬಲಕ್ಕೆ ಇರುವ ಭೂಚಿತ್ರವನ್ನು ಗಮನಿಸುತ್ತಾ ಬನ್ನಿ. ಅದು ವಾಲುತ್ತದೆ. ಭೂಮಿಯ ಚಿಕ್ಕ ಚಿತ್ರ, ಸೂರ್ಯನ ಸುತ್ತ ತೊಡಗಿದ ಪ್ರಯಾಣ, ಕರ್ಕಾಟಕ ಸಂಕ್ರಾಂತಿಗೆ ಸೇರಿ ನಿಲ್ಲುತ್ತದೆ.

ತಾರೀಕು ಜೂನ್ ೨೧/೨೨.

ಚಿಕ್ಕ ಭೂಮಿಯ ಚಿತ್ರವನ್ನು ಗಮನಿಸಿ. ಸೂರ್ಯನು ಭೂಮಿಯ ಉತ್ತರಾರ್ಧದ ಮೇಲೆ ಜ್ವಲಿಸುತ್ತಿದ್ದಾನೆ. ಕರ್ಕಾಟಕ ಸಂಕ್ರಾಂತಿ ವೃತ್ತ, ಅಂದರೆ ಉತ್ತರ ೨೩.೫°ಯ ಮೇಲಿದ್ದಾನೆ. ಗರಿಷ್ಠ ಸೌರತಾಪ ಆ ವೃತ್ತದ ಪ್ರದೇಶದ ಮೇಲಿರುತ್ತದೆ. ಭೂಮಿಯ ಉತ್ತರಾರ್ಧ ಭಾಗದಲ್ಲೆಲ್ಲಾ ಹಗಲು ಹೊತ್ತಿನ ಅವಧಿ ಹೆಚ್ಚು, ರಾತ್ರಿಯ ಅವಧಿ ಕಡಿಮೆ.

ಸಮಭಾಜಕ ವೃತ್ತದಿಂದ ಉತ್ತರಕ್ಕೆ ಹೋಗುತ್ತಾ ಹೋಗುತ್ತಾ, ಹಗಲಿನ ಅವಧಿ ಹೆಚ್ಚಾಗುತ್ತಾ ಹೋಗುತ್ತದೆ. ರಾತ್ರಿಯ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ.
ಉತ್ತರ ಮೇರು ಧ್ರುವ ವೃತ್ತದಿಂದ ಉತ್ತರ ಧೃವದ ತನಕ, ೨೪ ಘಂಟೆಯೂ ಸೂರ್ಯ ಪ್ರಕಾಶಿಸುತ್ತಿದ್ದಾನೆ. ಸೂರ್ಯಾಸ್ತಮವೇ ಇಲ್ಲ!
ಉತ್ತರಾರ್ಧದಲ್ಲಿ ಬೇಸಿಗೆಯ ಕಾಲ.

ಭೂಮಿಯ ದಕ್ಷಿಣಾರ್ಧದಲ್ಲೋ, ಇದಕ್ಕೆ ತದ್ವಿರುಧ್ಧ! ದಕ್ಷಿಣ ಧ್ರುವದತ್ತ ಹೋಗುತ್ತಾ ಹೋಗುತ್ತಾ, ಹಗಲಿನ ಅವಧಿ ಕಡಿಮೆಯಾಗುತ್ತದೆ, ರಾತ್ರಿಯ ಅವಧಿ ಹೆಚ್ಚುತ್ತದೆ. ದಕ್ಷಿಣ ಮೇರು ಧ್ರುವ ವೃತ್ತದಿಂದ ದಕ್ಷಿಣ ಧ್ರುವದತ್ತ ಹೋದರೆ, ೨೪ ಘಂಟೆಯೂ ಕತ್ತಲು! ಸೂರ್ಯ ನಾಪತ್ತೆ! ಈ ಗೋಳಾರ್ಧದಲ್ಲಿ ಚಳಿಗಾಲ.
ತಿಂಗಳುಗಳ ಪಟ್ಟಿಯ ಮೇಲೆ ಒಂದು ಚಿಕ್ಕ ಚಲಿಸುವ “ಬಟನ್” ಇದೆಯಲ್ಲವೆ? ಅದನ್ನು ಎಳೆದು, ಆಗಸ್ಟ್ ೧ನೆಯ ತಾರೀಕಿಗೆ ತಂದು ನಿಲ್ಲಿಸಿ.

ಆಗಸ್ಟ್ ೧ನೆ ತಾರೀಕು, ೨೦೧೧, ರಂಜಾನ್ ಪ್ರಾರಂಭ. ರಂಜಾನ್ ತಿಂಗಳಲ್ಲಿ, ದಿನವೂ ಉಪವಾಸ ಸೂರ್ಯೋದಯಕ್ಕೆ ಸ್ವಲ್ಪ ಮುನ್ನ ಪ್ರಾರಂಭ (ಫಜ್ರ್). ಸೂರ್ಯಾಸ್ತಮದ ತನಕ ಉಪವಾಸವಿದ್ದು, ನಂತರ ಇಫ್ತಾರ್ (ಆಹಾರ ಸೇವನೆ).

ಈಗ ಭೂಮಿ ಮತ್ತು ಸೂರ್ಯನ ಸ್ಥಾನಗಳನ್ನು ಗಮನಿಸಿ. ಸೂರ್ಯ ಇನ್ನೂ ಉತ್ತರಾರ್ಧದಲ್ಲೇ ಇದ್ದಾನೆ. ಉತ್ತರದಲ್ಲಿ ಇನ್ನೂ ಬೇಸಿಗೆಯೇ.
ಜೂನ್ ತಿಂಗಳಿನಷ್ಟು ಇಲ್ಲದಿದ್ದರೂ, ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ಕಡೆಗೆ ಹೋಗುತ್ತಾ ಹೊಗುತ್ತಾ, ಹಗಲಿನ ಅವಧಿಯು ರಾತ್ರಿಗಿಂತ ಈಗಲೂ ಹೆಚ್ಚಾಗುತ್ತಲೇ ಇದೆ. ಸಮಭಾಜಕ ವೃತ್ತದಿಂದ ದಕ್ಷಿಣ ಧ್ರುವದ ಕಡೆಗೆ ಹೋಗುತ್ತಾ ಹೊಗುತ್ತಾ,  ರಾತ್ರಿಯ ಅವಧಿಯು ಹಗಲಿಗಿಂತ ಈಗಲೂ ಹೆಚ್ಚಾಗುತ್ತಲೇ ಇದೆ.

ಈ ಮೂರು ಜಾಗಗಳಲ್ಲಿರುವ ಮುಸಲ್ಮಾನರಲ್ಲಿ ಗರಿಷ್ಠ ಹೊತ್ತು ಉಪವಾಸ ಇರುವವರು ಯಾರು? ಕನಿಷ್ಠ ಹೊತ್ತು ಉಪವಾಸ ಇರುವವರು ಯಾರು?

  1. ಅಂಟಾರ್ಕ್ಟಿಕಾ ಖಂಡದಲ್ಲಿ ವಾಸವಾಗಿರುವ ವೈಜ್ಞಾನಿಕ ತಂಡದಲ್ಲಿ ಯಾರಾದಾರೂ ಮುಸಲ್ಮಾನರಿದ್ದರೆ ಅವರು
  2. ನಾರ್ವೇ ದೇಶದಲ್ಲಿ ವಾಸವಾಗಿರುವ ಮುಸಲ್ಮಾನರು
  3. ಕರ್ಣಾಟಕದಲ್ಲಿ ವಾಸವಾಗಿರುವ ಮುಸಲ್ಮಾನರು

ಯಾಕೆ ಅಂತ ವಿಚಾರ ಮಾಡಿದಾಗ, ಅಕ್ಷಾಂಶಕ್ಕೂ, ರಂಜಾನಿಗೂ ಇರುವ ಸ್ವಾರಸ್ಯವಾದ ಸಂಬಂಧ ತಿಳಿಯುತ್ತದೆ.

ರಂಜಾನ್ ಮುಬಾರಕ್!

Categories:

No responses yet

Share your thoughts

%d bloggers like this: