ನೂರಾರು, ಇಲ್ಲ ಸಾವಿರಾರು, ವರ್ಷಗಳಿಂದ ಮಾನವರು ಭೂಮಿಯನ್ನು ನೋಡಿ ವಿಸ್ಮಯಗೊಂಡದ್ದು ಉಂಟು. ವಿಸ್ಮಯ ಮಾತ್ರ ಏನು, ನವ (ಅಂದರೆ ಒಂಭತ್ತು) ರಸಗಳನ್ನೂ ಅನುಭವಿಸಿದ್ದಾರೆ. ಇಂದಿಗೂ ನಾವು ಭೂಮಿಯನ್ನು ಗಮನಿಸಿದಾಗ ಅನೇಕ ವಿಧವಾದ ಭಾವನೆಗಳೂ ಯೋಚನೆಗಳೂ  ನಮ್ಮಲ್ಲಿ ಮೂಡುತ್ತವೆ.

ಇವೆಲ್ಲವೂ ಭೂಗೋಳಶಾಸ್ತ್ರದ ವಿಷಯಗಳೇ. ಆದರೆ ನಾವು ಓದುವ ಯಾವ ಪಠ್ಯ ಪುಸ್ತಕದಲ್ಲೂ ಇವುಗಳ ಬಗೆ ಒಂದು ಮಾತೂ ಇಲ್ಲ.

ಈ ಸಂಚಿಕೆಯಲ್ಲಿ ಭೂಗೋಳಶಾಸ್ತ್ರವನ್ನ ಹಾಡುಗಳಲ್ಲಿ ಕಾಣೋಣ ಬನ್ನಿ.

ಮಳೆಗಾಲ (ಮಾನ್ಸೂನ್)

ಭಾರತದಲ್ಲಿ ಎರಡು ವಿಧವಾದ ಮಾನ್ಸೂನ್ ಕಾಲಗಳನ್ನು ಗುರುತಿಸುತ್ತೇವೆ ಅಲ್ಲವೆ ?

ನೈಋತ್ಯ ಮಾನ್ಸೂನ್ – ನೈಋತ್ಯ ದಿಕ್ಕಿನಿಂದ ಬೀಸಿ ಬರುವ ಗಾಳಿಯ ಪ್ರವಾಹ. ಈ ಗಾಳಿಗಳ ಪ್ರಭಾವದಿಂದ ಬರುವ ಮಳೆಯನ್ನು ಮುಂಗಾರು ಮಳೆ ಎಂದು ಕರೆಯುತ್ತೇವೆ.

ಅಂತೆಯೇ ಈಶಾನ್ಯ ಮಾನ್ಸೂನ್ – ಈಶಾನ್ಯ  ದಿಕ್ಕಿನಿಂದ ಬೀಸಿ  ಬರುವ ಗಾಳಿಯ ಪ್ರವಾಹ. ಈ ಗಾಳಿಗಳ ಪ್ರಭಾವದಿಂದ ಬರುವ ಮಳೆಯನ್ನು ಹಿಂಗಾರು ಮಳೆ ಎಂದು ಕರೆಯುತ್ತೇವೆ.

ಹಿಂಗಾರು ಮಳೆಗಿಂತ ಮುಂಗಾರು ಮಳೆಯಿಂದ ನಮಗೆ ಹೆಚ್ಚು ಮಳೆ ದೊರೆಯುತ್ತದೆ. ಈ ಮಳೆ ಭಾರತದ ಪಶ್ಚಿಮ ಘಟ್ಟದ, ಅಂದರೆ ಮಲೆನಾಡ, ಪ್ರದೇಶದಲ್ಲಿ ಬಹಳ ಭಾರಿ. ಮತ್ತು ಅನುಭವಿಸಲೂ  ಸೊಗಸು. ಮಲೆನಾಡಿನಿಂದ ಮುಂದಕ್ಕೆ ಹಾದು, ಭಾರತ ಖಂಡವನ್ನು ದಾಟಿ ನೈಋತ್ಯ ಭಾರತದೆಡೆಗೆ ಹೋಗುವ ಈ ಮಾನ್ಸೂನ್ ಗಾಳಿಯ ಸೊಗಸೆಷ್ಟೆಂದರೆ, ನಮ್ಮ ಪ್ರಸಿದ್ಧ ಕವಿರತ್ನ ಕಾಳಿದಾಸ ಇದನ್ನು ಆಧರಿಸಿ  ಮೇಘದೂತಂ ಎಂಬ ಅದ್ಭುತವಾದ ಕಾವ್ಯವನ್ನೇ ನಮಗೆ ಕೊಟ್ಟಿದ್ದಾನೆ.

ಪ್ರಾಚೀನ ಕವಿಯಾದ ಅವನು ಮಾತ್ರವಲ್ಲ ಇತರ ಅನೇಕ ಕವಿಗಳೂ ನಾನಾ ಭಾಷೆಗಳಲ್ಲಿ ನಮಗೆ ಮನೋಹರವಾದ ಪದ್ಯಗಳನ್ನೂ ಗೀತೆಗಳನ್ನೂ ರಚಿಸಿ ಕೊಟ್ಟಿದ್ದಾರೆ.

ಇಲ್ಲಿ ನೋಡಿ ಒಂದು ಉದಾಹರಣೆ … ಮುಂಗಾರು ಮಳೆ ಅನ್ನುವ ಫಿಲಂನಲ್ಲಿ ಅದೇ ಹೆಸರಿನ ಹಾಡು ಎಷ್ಟು ಲಕ್ಷ ಕನ್ನಡಿಗರ ಮನಸ್ಸನ್ನು ಸೆಳೆದಿದೆ!  ಈ ಹಾಡನ್ನು ಕೆಳಗೆ ಕೊಟ್ಟಿರುವ ಯೂ-ಟ್ಯೂಬ್ ಲಿಂಕ್ ಮೂಲಕ ಕೇಳಿ.

ಇನ್ನು ಶಾಸ್ತ್ರೀಯ ಕರ್ನಾಟಕ ಸಂಗೀತಲ್ಲಿ ನೋಡಿದರೆ, ಅತಿ ಪ್ರಸಿದ್ಧವಾದ ಆನಂದಾಮೃತ-ಕರ್ಷಿಣಿ ಎಂಬ ಸಂಸ್ಕೃತದ ಹಾಡು. ಇದು ಶ್ರೀ ಮುತ್ತುಸ್ವಾಮಿ ದೀಕ್ಷಿತರ ರಚನೆ, ರಾಗ ಅಮೃತವರ್ಷಿಣಿ, ಆದಿ ತಾಳ . ಇದರ ಹಿನ್ನೆಲೆಯಲ್ಲಿ ಒಂದು ಸ್ವಾರಸ್ಯವಾದ  ಕಥೆಯಿದೆ.

ಶ್ರೀ ಮುತ್ತುಸ್ವಾಮಿ ದೀಕ್ಷಿತರು. ಕಾಲ್ಪನಿಕ ಚಿತ್ರ. ತಿರುವಾರೂರು, ತಮಿಳು ನಾಡು. ಚಿತ್ರಗ್ರಹಣ – ಡಾ|| ಚಂದ್ರಶೇಖರ ಭಾಲಚಂದ್ರನ್

ಹತ್ತೊಂಭತ್ತನೆಯ  ಶತಮಾನದ ಪೂರ್ವ ಭಾಗದಲ್ಲಿ ದೀಕ್ಷಿತರು ತಮಿಳು ನಾಡಿನ ಸಾತ್ತೂರು ಎಂಬ ಊರಿನಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿ ಭವಾನೀ ಎಂಬ ಪಾರ್ವತಿಯ ಪರ್ಯಾಯ ಮುಖ್ಯ ದೇವತೆ  (ಭವ ಎನ್ನುವುದು ಶಿವನ ಒಂದು ಹೆಸರು, ಅವನ ಪತ್ನಿ ಭವಾನೀ).

ಆ ಪ್ರಾಂತ್ಯದಲ್ಲಿ, ಮುಂಗಾರು ಮಳೆ ಬಹಳ ಅಪರೂಪ. ಕಪ್ಪಾದ ಗಂಭೀರವಾದ ಮುಂಗಾರು ಮೇಘಗಳು ಮಳೆಯನ್ನು ಸುರಿಸದೆ ಹಾದು  ಹೋಗುತ್ತವೆ. ಹಿಂಗಾರು ಮಳೆಯಿಂದಲೂ ಅಂತದ್ದೇನು ಮಳೆಯಿಲ್ಲ.

ಎಲ್ಲೋ ಅಲ್ಪ ಸ್ವಲ್ಪ ಮಳೆ ಬಂದಾಗ, ಅಲ್ಲಿಯ  ಪ್ರಾಂತ್ಯದ ಅರಸರೋ  ಪಾಳೆಯಗಾರರೋ ಕಟ್ಟಿಸಿದ್ದ ಕೆರೆಗಳಲ್ಲಿ ನೀರು ಶೇಖರಿಸಿಟ್ಟು ಆ ನೀರನ್ನು ನೀರಾವರಿ ಮತ್ತಿತರ ಅವಶ್ಯಕತೆಗಳಿಗೆ ಜನ ಉಪಯೋಗಿಸುವುದು ಬಹಳ ಹಿಂದಿನ ಕಾಲದಿಂದಲೂ ನಡೆದು ಬಂದಿದ್ದ ಕಧೆ. ಹೀಗಾಗಿ ಆ ಪ್ರಾಂತ್ಯದಲ್ಲಿ ಬರಗಾಲ ಬರುವುದು ಅಪರೂಪವಲ್ಲ.

ದೀಕ್ಷಿತರು ಅಲ್ಲಿ ತಂಗಿದ್ದ ಸಮಯದಲ್ಲಿ ಬರಗಾಲವಿದ್ದು ಆ ಜನರು ಬಹಳ ತೊಂದರೆ ಪಡುತ್ತಿದರು. ಅವರು ದೀಕ್ಷಿತರ ಬಳಿ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡು  ತಮ್ಮ ಪರವಾಗಿ ಮಳೆ ಬರುವಂತೆ ಪ್ರಾರ್ಥಿಸಬೇಕೆಂದು ಕೇಳಿಕೊಂಡರು.

ದೀಕ್ಷಿತರಿಗೆ ಅವರಲ್ಲಿ ಅನುಕಂಪ ಉಂಟಾಗಿ, ಭವಾನಿಯನ್ನು ಕುರಿತು, ಆ ಹಾಡನ್ನು ಹಾಡಿದರು. ಆಗ ಸಮೃದ್ಧವಾಗಿ ಮಳೆ ಬಂದು ಜನರ ನೀರಿನ ಅಭಾವ ತೀರಿತು.

ಈ ಕಥೆ ನಿಜವೋ ಕಾಲ್ಪನಿಕವೋ. ಆದರೆ ನಾಡ ಜನರ ಮೇಲೆ ದಿಕ್ಷೀತರಿಗುಂಟಾದ ಅನುಕಂಪ ಹಾಗೂ  ಭೂಗೋಳಶಾಸ್ತ್ರದ ಒಂದಂಶದಲ್ಲಿ ಅವರು ದೈವ ಕೃಪೆಯನ್ನು ಬೇಡಿದ್ದು ಸ್ವಾರಸ್ಯಕರ.

ಅಮೃತವರ್ಷಿಣಿ ಎಂದರೆ ಅಮೃತವನ್ನು ಸುರಿಸುವವಳು ಎಂದರ್ಥ – ಇದು ರಾಗದ ಹೆಸರು. ಇನ್ನು ಭವಾನಿದೇವಿಯನ್ನು ಕುರಿತು ಅವರು ಉಪಯೋಗಿಸಿದ ಪದ ಆನಂದಾಮೃತಕರ್ಷಿಣೀ – ಅಂದರೆ ಆನಂದ ಎನ್ನುವ ಅಮೃತವನ್ನು ಸುರಿಯುವಂತೆ ಮಾಡುವವಳು ಎಂದರ್ಥ.  ಈ ಹಾಡನ್ನು ಕೆಳಗೆ ಕೊಟ್ಟಿರುವ ಯೂ-ಟ್ಯೂಬ್ ಲಿಂಕ್ ಮೂಲಕ ಕೇಳಿ.

ನಾನು ಚಿಕ್ಕವನಾಗಿದ್ದಾಗ ನನ್ನ ಗೆಳೆಯರೊಂದಿಗೆ ಹಾಡುತ್ತಿದ್ದ ಚಿಕ್ಕ ಹಾಡಿದು –

ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ

ಮಕ್ಕಳಿಗೆ ತಾಯಂದಿರು ಹಾಡುತ್ತಿದ್ದ ಒಂದು ಪುಟ್ಟ ಗೀತೆ –

ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಜಾರಿ  ಬಿದ್ದು
ಬಟ್ಟೆಯೆಲ್ಲಾ ಕೊಳೆ

ಹೀಗೆ ಮಾತ್ರವಲ್ಲದೆ ಇನ್ನೂ ಎಷ್ಟೆಷ್ಟೋ ವಿಧಗಳಲ್ಲಿ ನಮ್ಮ ಸಂಸ್ಕೃತಿಯು ಭೂಗೋಳ ಶಾಸ್ತ್ರವನ್ನು ಅನುಭವಿಸಿದೆ … ಮತ್ತು ಕೊಂಡಾಡಿದೆ.

ಇಂತಹ ಬೇರೆ ಬೇರೆ ಭಾಷೆಗಳಲ್ಲಿ ನಮ್ಮ ಮಾನ್ಸೂನ್-ಗಳನ್ನು ಒಳಗೊಂಡ ಹಾಡುಗಳನ್ನು ಹುಡುಕಿ.


Categories:

No responses yet

Share your thoughts

%d bloggers like this: