ಎಲ್ಲರಿಗೂ  ನಮಸ್ಕಾರ !

ಕನ್ನಡದಲ್ಲಿ ಭೂಗೋಳಶಾಸ್ತ್ರಕ್ಕೂ ನಮ್ಮ ನಿಮ್ಮ ಜೀವನಕ್ಕೂ ಇರುವ ಸಂಬಂಧಗಳ ಬಗ್ಗೆ ಕನ್ನಡದಲ್ಲಿ “ಬ್ಲಾಗ್” ಬರೆಯಲು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದೆ. ಆದರೆ ಹಲವಾರು ಕಾರಣಗಳಿಂದಾಗಿ ಅದನ್ನು ಮುಂದುವರಿಸಲಿಲ್ಲ. ಈಗ ಪುನಃ ಪ್ರಾರಂಭಿಸಿ ಮುಂದುವರಿಸೋಣ ಎಂದುಕೊಂಡು ಬರೆಯಲಿಕ್ಕೆ ಹೊರಟಿದ್ದೇನೆ.

ಸಾಧ್ಯವಾದಷ್ಟು ಮಟ್ಟಿಗೆ ಇಂಗ್ಲೀಶಿನಲ್ಲಿ ಬರೆದ ಲೇಖನಗಳನ್ನು ಅನುವಾದ ಮಾಡದೆ ಕನ್ನಡದಲ್ಲಿಯೇ ಬರೆಯಲು ಪ್ರಯತ್ನ ಮಾಡುತ್ತೇನೆ. ಆದರೂ ಹಲವು ಬಾರಿ ಅನುವಾದ ಮಾಡುವುದಲ್ಲೆದೆ ಬೇರೆ ದಾರಿಯಿಲ್ಲ.  ಇದಕ್ಕೆ ಕಾರಣಗಳುಂಟು. ಒಂದು: ಭೂಗೋಳಶಾಸ್ತ್ರದ ಕೆಲವು – ಅಲ್ಲ, ಹಲವು – ವಿಷಯಗಳಿಗೆ ಕನ್ನಡದಲ್ಲಿ ಪದಗಳು ‘ರೆಡಿ ಮೇಡ್’ ಆಗಿ ಸಿಗುವುದಿಲ್ಲ. ಎರಡು: ಮುಂಚೆ ಕನ್ನಡದಲ್ಲಿ ಲೇಖನಗಳನ್ನು ಬರೆದಾಗಲಿಂದ ಈಗ್ಗೆ ಬರೆಯಬೇಕೆಂದು ತೋಚಿದ ಅನೇಕ ವಿಷಯಗಳ ಬಗೆ ಆಗಲೇ ಬರೆದಾಗಿದೆ. ಹಲವು ಸನ್ನಿವೇಶಗಳಲ್ಲಿ, ಅನುವಾದ ಮಾಡುವುದೇ ಮೇಲು ಎನ್ನಿಸುತ್ತದೆ. ಅಲ್ಲದೆ ಸ್ವಲ್ಪ ಮಟ್ಟಿಗೆ ಸಮಯ ಉಳಿಸಲೂ ಅದು ಅನುಕೂಲವಾಗಬಹುದು ಅನ್ನಿಸುತ್ತದೆ.

ಈ ಲೇಖನಗಳನ್ನು ಯಾರಿಗಾಗಿ ಬರೆಯುತ್ತೇನೆ?

ಮೊಟ್ಟಮೊದಲಾಗಿ ಯುವಕರಿಗಾಗಿ. ಅದರಲ್ಲೂ ಶಾಲೆಯಲ್ಲಿ ಓದುವ ಮಕ್ಕಳಿಗಾಗಿ. ಎರಡನೆಯದಾಗಿ ಶಾಲೆಗಳಲ್ಲಿ ಪಾಠ ಹೇಳುವ ಅಧ್ಯಾಪಕರಿಗೆ. ಮತ್ತೆ ಭೂಗೋಳಶಾಸ್ತ್ರದಲ್ಲಿ ಎಳ್ಳಷ್ಟಾದರೂ ಕುತೂಹಲವೋ ಆಸಕ್ತಿಯೋ ಇದ್ದವರಿಗೆ.

ಇವುಗಳನ್ನು ಏಕೆ ಬರೆಯುತ್ತೇನೆ?

ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವನು. ಪ್ರಾಥಮಿಕ, ಮಾಧ್ಯಮಿಕ, ಹಾಗೂ  ಪ್ರೌಢ ಶಾಲೆಗಳಲ್ಲಿ ಓದುವಾಗ ನನಗೆ ಅನೇಕ ಬಹಳ ಒಳ್ಳೆಯ ಅಧ್ಯಾಪಕರಿದ್ದರು. ಇದು ನನ್ನ ಭಾಗ್ಯ. ಅವರಿಂದ ನಾನು ಪಡೆದ ಕಲಿಕೆಗೆ ಅವರಿಗೆ ಪ್ರತಿಯಾಗಿ ನಾನೇನನ್ನೂ ಅವರಿಗೆ ಕೊಡಲಾರೆ.

ಈ ಶ್ಲೋಕದ ಮಾತು ಬಹಳ ನಿಜ –

ಏಕಮೇವಾಕ್ಷರಂ  ಯಸ್ತು ಗುರು: ಶಿಷ್ಯಮ್ ಪ್ರಬೋಧಯೇತ್ ।
ಪೃಥಿವ್ಯಾಯಂ ನಾಸ್ತಿ ತದ್ದ್ರವ್ಯಮ್ ಯದ್ಧತ್ವಾ ಚಾನೃಣೀ ಭವೇತ್ ।।

ಗುರುವು ಶಿಷ್ಯನಿಗೆ ಕಳಿಸಿದ್ದು ಒಂದೇ ಅಕ್ಷರವಾದರೂ
ಆ ಋಣವನ್ನು ತೀರಿಸಿಕೊಳ್ಳಲು ಪ್ರಪಂಚದಲ್ಲಿ ಅಂತಹ ಸಂಪತ್ತು ಇಲ್ಲ

ಆದ್ದರಿಂದ ನನಗೆ ದೊರಕಿದ ಭಾಗ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದೊಂದೇ ದಾರಿ. ಅದರಿಂದ ನನಗೆ ಬಹಳ ತೃಪ್ತಿಯೂ ಆನಂದವೂ  ದೊರೆಯುತ್ತವೆ. ಯಾವುದೇ ಭಾಷೆಯಲ್ಲಿ ನಾನು ಭೂಗೋಳಶಾಸ್ತ್ರದ ಬಗೆ ಬರೆಯುವುದಕ್ಕೆ ಇದೇ ಅತಿ ಮುಖ್ಯವಾದ ಕಾರಣ.

ನನ್ನ ದೃಷ್ಟಿ

ನನಗೆ ಬರೀ ಪಠ್ಯ ಪುಸ್ತಕದಿಂದ ಕಲಿಯುವುದು ಸ್ವಲ್ಪವೂ ಇಷ್ಟವಿಲ್ಲ. ನನ್ನ ಮನಸ್ಸನ್ನು ಸೆಳೆದ ಉಪಾಧ್ಯಾಯರೂ ನನಗೆ ಹಾಗೆಯೇ ಕಲಿಸಿದರು. ಪಠ್ಯಪುಸ್ತಕ ಪರೀಕ್ಷೆಗಾಗಿ ಉಪಯೋಗಿಸಿದರು. ಸ್ವಲ್ಪ ಮಟ್ಟಿಗೆ ಒಂದು ದಿಕ್ಸೂಚಿಯಾಗಿ ಉಪಯೋಗಿಸಿದರು. ಮಿಕ್ಕಿದ್ದೆಲ್ಲ ಅವರು ನಮ್ಮ ಅನುಭವಕ್ಕೆ ಬರುವಂತಹ ಉಪಹಾರಣೆಗಳನ್ನೇ ಉಪಯೋಗಿಸಿ ಕಲಿಸಿದರು.

ಆದ್ದರಿಂದ ಕಲಿಕೆ ಕುತೂಹಲ ಹುಟ್ಟಿಸುವಂತಾಯಿತು. ಅದರಿಂದಾಗಿ ಮತ್ತಷ್ಟು ಕಲಿಯಲು ಆಸಕ್ತಿಯಿಂದ ಹೊರಟೆ. ನಾನು ಏನನ್ನು ಕಲಿಯ ಬಯಸಿದರೂ  ನನಗೆ ಹೇಳಿಕೊಡಲು ಅವರು ಯಾವಾಗಲೂ ಆಸಕ್ತಿಯಿಂದ  ಸಿಧ್ಧರಾಗಿದ್ದರು.

ಇಂತಹ ಭಾಗ್ಯವನ್ನು ಹಂಚಿಕೊಳ್ಳದಿದ್ದರೆ ಅವರು ಮೆಚ್ಚಲಾರರು.

ಹೀಗಾಗಿ ಇದು ನನ್ನ ಪಾಲಿಗೆ ಸಂತೋಷದ ಕರ್ತವ್ಯವಾಗಿದೆ.

ಹೊರಡೋಣವಾ ?

ಚಿತ್ರ: ದಿ।। ಶ್ರೀ ಬಿ. ನರಸಣ್ಣ, ಎಂ. ಎ ., ಎಂ ಎಡ್.  (೧೯೨೦ – ೧೯೮೭).  ಭೂಗೋಳಶಾಸ್ತ್ರ ಉಪಾಧ್ಯಾಯರು, ನ್ಯಾಷನಲ್ ಹೈ ಸ್ಕೂಲ್, ಬೆಂಗಳೂರು.

Categories:

No responses yet

Share your thoughts

%d bloggers like this: