ಯಾರೋ ಒಬ್ಬರು (ನನ್ನ ಅವರ ಕಣ್ಣುಗಳು ಸಂಧಿಸಿದಾಗ, ಮುಗುಳ್ನಗೆಯೊಡನೆ): “ನೀವು  ಬೆಂಗಳೂರ?”
ನಾನು (ಅಂತೆಯೇ ಮುಗುಳ್ನಗೆಯೊಂದಿಗೆ): “ಹೌದು. ನೀವು?”
ಅವರು: “ಓ! ನಾನೂ ಬೆಂಗಳೂರೇ. ಎಲ್ಲಿ ಬೆಂಗಳೂರಲ್ಲಿ?”
ನಾನು: “ಜಯನಗರ.”
ಅವರು: “ಓಹೋ! ನಾನು ಅಷ್ಟೇ. ಯಾವ ಬ್ಲಾಕ್ ನಿಮ್ಮದು?”
ನಾನು: “ಅರನೇ ಬ್ಲಾಕ್.”
ಅವರು: “ಓಹೋ. ಎಷ್ಟನೇ ಕ್ರಾಸ್?”

ಎಷ್ಟೋ ಬಾರಿ ಇಂತಹ ಸಂಭಾಷಣೆ ನಾನು ರೈಲಲ್ಲೋ ಬಸ್ಸಲ್ಲೋ ಪ್ರಯಾಣ ಮಾಡುವಾಗ ನಡೆದಿದೆ.

ಏನೋ … ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲ ಎರಡೋ ಮೂರೋ ಪ್ರಶ್ನೆಗಳು ಬರೋದರಲ್ಲಿಯೇ ಭೌಗೋಳಿಕ (ಅಂದರೆ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದ) ಪ್ರಶ್ನೆಗಳನ್ನ ಕೇಳ್ತೀವಿ.

ಇದು ಬಹಳ ಸಹಜ.

ಮೊದಲನೆಯ ಅಂಶ ಗಮನಿಸಿ. ನಿಮ್ಮ ಊರು ಯಾವುದು ಅಂತ ಕೇಳುವ ಪ್ರಶ್ನೆ “ನೀವು ಬೆಂಗಳೂರ?” ಅಂತ ಬಹಳ ಸಂಕ್ಷಿಪ್ತವಾಗಿ ಕೇಳಿದ್ದಾಯಿತು. ಊರು ಅನ್ನುವುದು ಹಲವಾರು ಜನರು ಕೂಡಿ ಬಾಳುವ ಸ್ಥಳ ಅಥವ ಪ್ರದೇಶ. “ಸ್ಥಳ ಅಥವ ಪ್ರದೇಶ” ಎಂದ ಕೂಡಲೇನೆ ಅದು ಒಂದು ಬೌಗೋಳಿಕ ತತ್ತ್ವ, ಅಲ್ಲವಾ? ಊರು ಎನ್ನುವ ಸ್ಥಳದಲ್ಲಿ, ಜನ ಸಂಖ್ಯೆ, ಜನರ ಸಾಂದ್ರತೆ (ಅಂದರೆ ಜನಸಂದಣಿ ಅಂತ ಕೂಡ ಹೇಳ ಬಹುದು … ಪ್ರತಿಯೊಂದು ಚದುರ ಕಿಲೋಮೀಟರಿನಲ್ಲಿ ಎಷ್ಟು ಜನರಿದ್ದಾರೆ), ಅಲ್ಲಿರುವ ನಾನಾ ವ್ಯವಸ್ಥೆಗಳು (ಬೀದಿಗಳು, ಉದ್ಯಾನಗಳು, ಕಟ್ಟಡಗಳು, ಇತ್ಯಾದಿ), ಜನರ ಹರಡುವಿಕೆ (ಯಾವ ಭಾಗದಲ್ಲಿ ಜನರು ಹೆಚ್ಚಾಗಿಯೋ ಕಡಿಮೆಯಾಗಿಯೋ ಇದ್ದಾರೆ, ಊರಿನ ಯಾವ ಯಾವ ಭಾಗಗಳಲ್ಲಿ ಎಂತಹ ಜನರು ವಾಸಿಸುತ್ತಾರೆ, ಇತ್ಯಾದಿ), ಹೀಗೆ ಅನೇಕ ವಿಷಯಗಳು ಏಳುತ್ತವೆ.

ಹಾಗಾಗಿ, “ಎಲ್ಲಿ ಬೆಂಗಳೂರಲ್ಲಿ?” ಅಂತ ಪ್ರೆಶ್ನೆ ಕೇಳಿದಲ್ಲಿ ಈ ವಿಷಯಗಳೆಲ್ಲ ಅಡಗಿವೆ. ಜಯನಗರದಿಂದ ಬಂದವರಾದರೆ ಇಂತಹ ಸಾಮಾಜಿಕ, ಆರ್ಥಿಕ ಮೊದಲಾದ ಅಂತಸ್ತಿನವರು ಎಂಬ ಯಾವುದೋ ಕೆಲವು ಕಲ್ಪನೆಗಳು ಕೇಳುವವರ ಮನಸ್ಸಿನಲ್ಲಿ ಮೂಡುತ್ತವೆ. ಸ್ಥಳಗಳ ಬಗ್ಗೆ ಮತ್ತು ಅಲ್ಲಿರುವ ಜನರ ಬಗ್ಗೆ ಇರುವ ಕಲ್ಪನೆಗಳು ಕೂಡ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದವೇ. ಇಂತಹ ದೃಷ್ಟಿಕೋನ ಬರೀ ನಿಮ್ಮ ಭೂಗೋಳಶಾಸ್ತ್ರದ ಪಠ್ಯಪುಸ್ತಕ ಓದಿದರೆ ಸಿಕ್ಕುವುದಿಲ್ಲ!

ಎರಡನೆಯ ಅಂಶ ಗಮನಿಸಿ. ತಾವೂ ನಾನು ಬೆಂಗಳೂರಿನವರೇ ಅಂತ ತಿಳಿದ ಕೂಡಲೇ, ಬೆಂಗಳೂರಿನಲ್ಲಿ ಎಲ್ಲಿ ಅಂತ ಕೇಳಿದರು. ಬೆಂಗಳೂರು ಬಹಳ ದೊಡ್ಡ ಪ್ರಮಾಣ ಪ್ರದೇಶ. ಅದರಲ್ಲಿ ಇನ್ನೂ ನಿಖರವಾಗಿ ನಾನು ಎಲ್ಲಿಯವನು ಅಂತ ತಿಳಿಯುವ ಕುತೂಹಲ ಅವರಿಗೆ ಬಂತು. ನಮಗೆ ಪ್ರದೇಶಗಳ ಪರಿಚಯ (ಅಂದರೆ ಭೂಗೋಳದ ಅರಿವು) ಹೆಚ್ಚಾದಾಗ, ಈ ಪ್ರಶ್ನೆಗಳು ಏಳುವುದು ಬಹಳ ಸಹಜ. ಬೆಂಗಳೂರಿನ ಪರಿಚಯ ಅವರಿಗೆ ಇಲ್ಲದಿದ್ದರೆ ಈ ಪ್ರಶ್ನೆಯ ಸರಣಿಯನ್ನು ಮುಂದುವರಿಸುತ್ತಿರಲಿಲ್ಲ. ಈ ‘ಪ್ರಮನ ಅನ್ನುವುದು ಭೂಗೋಳಶಾಸ್ತ್ರದ ಒಂದು ಬಹಳ ಮುಖ್ಯವಾದ ವಿಷಯ. (ಇದರ ಬಗ್ಗೆ ಮುಂದೆ ಯಾವಾಗಲಾದರೂ ಸ್ವಲ್ಪ ವಿವರವಾಗಿ ಬರೀತಿನಿ.)

ಮೂರನೆಯ ವಿಷಯ. ಯಾರೇ ಒಬ್ಬರು ಯಾವ ಜಾಗದವರು ಅಂತ ತಿಳಿದರೆ, ಅವರ ಬಗ್ಗೆ ಅಲ್ಪ ಸ್ವಲ್ಪವಾದರೂ ತಿಳಿದುಕೊಂಡಂತೆ. ಆದರೆ ಇದು ಎಷ್ಟು ಮಟ್ಟಿಗೆ ನಿಜ, ಎಷ್ಟು ಮಟ್ಟಿಗೆ ನಮ್ಮ ಸರಿಯಾದ ಅಥವಾ ತಪ್ಪಾದ ಕಲ್ಪನೆ ಅಂತ ಹೇಳೋದು ಕಷ್ಟ. ಆದರೂ ಕೆಲ ಅಂಶಗಳು ಹೊರಬರಬಹುದು. ಉದಾಹರಣೆಗೆ: ಬೆಂಗಳೂರಿನಲ್ಲಿ ಐ. ಟಿ. ಹುದ್ದೆಯಲ್ಲಿ ಕೆಲಸ ಮಾಡುವವರು ಹೆಚ್ಚು ಅನ್ನುವ ನಂಬಿಕೆ (ಸರಿಯಾಗಿಯೋ ತಪ್ಪಾಗಿಯೋ) ಜನರಲ್ಲಿ ಮೂಡಿದೆ. ಹಾಗಾಗಿ, “ಓಹೋ , ಇವರು ಬೆಂಗಳೂರಿನವರಾ? ಹಾಗಾದರೆ ಐ.ಟಿ.ಯಲ್ಲಿ ಕೆಲಸ ಮಾಡುವವರಿರಬಹುದು.” ಎಂಬ ಕಲ್ಪನೆ ಬರಬಹುದು.

ನಮ್ಮ ವ್ಯಕ್ತಿತ್ವಕ್ಕೆ ಎಷ್ಟೋ ಪದರಗಳಿವೆ. ನನ್ನದೇ ಉದಾಹರಣೆ ತೆಗೆದುಕೊಂಡರೆ – ನಾನು ಇಂತವರ ಮಗ, ಇಂತವರ ಸೋದರ, ಇಂತವರ ಚಿಕ್ಕಪ್ಪ, ಇಂತವರ ಗುರು, ಇಂತಹ ಊರಿಗೆ ಸೇರಿದವನು … ತಿರುಗ ನೋಡಿದಿರಾ? ಭೂಗೋಳಶಾಸ್ತ್ರಕ್ಕೇ ಬಂದೆವು. ನಾನು ಯಾವ ಊರಿನವನು ಎನ್ನುವುದೂ ನನ್ನ ವ್ಯಕ್ತಿತ್ವದ ಒಂದು ಪದರ – ಪ್ರಪಂಚದ ವಿಷಯಗಳ ಬಗಗಿನ ನನ್ನ ದೃಷ್ಟಿಕೋನಗಳು, ನಾನು ಕನ್ನಡದಲ್ಲಿ ಉಪಯೋಗಿಸುವ ಪದಗಳು, ಕನ್ನಡದಲ್ಲಿ ಮಾತಾಡುವ ಶೈಲಿ, ಇತ್ಯಾದಿ ವಿಷಯಗಳು ಬೆಂಗಳೂರಿಗೆ ಸಂಬಂಧಿಸಿದವು. ಇಂಗ್ಲಿಷಿನಲ್ಲಿ ಒಂದು ಗಾದೆ ಇದೆ: ಹುಲಿಯನ್ನು ಕಾಡಿನಿಂದ ಹೊರಗೆ ತೆಗೆಯಬಹುದು ಆದರೆ ಕಾಡನ್ನು ಹುಲಿಯಿಂದ ಹೊರಗೆ ತೆಗೆಯಲಾಗುವುದಿಲ್ಲ. ಅದೇ ತರಹ ನನ್ನ ಬಗ್ಗೆಯು ಹೇಳಬಹುದು: ನನ್ನನ್ನು ಬೆಂಗಳೂರಿನಿಂದ ಹೊರಗೆ ತೆಗೆಯಬಹುದು ಆದರೆ ಬೆಂಗಳೂರನ್ನು ನನ್ನಿಂದ ಹೊರಗೆ ತೆಗೆಯಲಾಗುಗುದಿಲ್ಲ.

ಹೀಗೆ ನೋಡಿದಾಗ, ಒಬ್ಬರ ಬೌಗೋಳಿಕ ಹಿನ್ನೆಲೆಯನ್ನು ತಿಳಿದುಕೊಂಡರೆ ಅವರ ಬಗ್ಗೆ ಸ್ವಲ್ಪ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬಹುದು. ಹಾಗೆಯೇ, ಅವರ ಬಗ್ಗೆ ಕೆಟ್ಟ ಕಲ್ಪನೆಗಳನ್ನು ಮಾಡಿಕೊಂಡು ಅವರಲ್ಲಿ ಕ್ರೌರ್ಯದಿಂದಲೂ ವರ್ತಿಸಬಹುದು.

ಪರಸ್ಪರ ಅರ್ಥ ಮಾಡಿಕೊಂಡು ಸಹನೆಯಿಂದ ನಡೆದು ಕೊಳ್ಳಲು ಉಪಯೋಗಿಸಿದರೆ ಭೂಗೋಳಶಾಸ್ತ್ರ ನಮ್ಮೆಲ್ಲರ ಏಳಿಗೆಗೆ ಉತ್ತೇಜನ, ಬೆಂಬಲ, ಶಕ್ತಿ ಎಲ್ಲ ಕೊಡುತ್ತದೆ.

ಇಂತಹ ಭೂಗೋಳಶಾಸ್ತ್ರದ ತಿಳುವಳಿಕೆ ನಮ್ಮೆಲ್ಲರಲ್ಲೂ ನೆಲೆ ನಾಟಿದರೆ ನಮಗೂ ಲೋಕಕ್ಕೂ ಹಿತ.

– ಡಾ|| ಚಂದ್ರಶೇಖರ ಭಾಲಚಂದ್ರನ್ 

ಶೀರ್ಷಿಕಚಿತ್ರ – ಯಡಿಯೂರು ಕೆರೆ, ಬೆಂಗಳೂರು.Google Earth-ನಿಂದ ತೆಗೆದ ಚಿತ್ರ.

Categories:

No responses yet

Share your thoughts

%d bloggers like this: