ಸಮುದ್ರಯಾನ ಮಾಡಿ ಎಡರಿದರು … ಬಾಯಲ್ಲಿ ಬೆಂಕಿ ಬಿದ್ದು, ಮೂಗಲ್ಲಿ ನೀರು ಸುರಿದು, ಕಿವಿಯಲ್ಲಿ “ಗುಂಯ್”ಗುಟ್ಟುವ ಗಟ್ಟಿಯಾದ ಸದ್ದು ಕೇಳುತ್ತಾ, ತಲೆ ಸಿಡಿದುಹೋಗುವಂತಾಗಿ ಬಾಯಿ ಬಡಿದುಕೊಂಡು, ಕೈಗಳನ್ನು ಅತ್ತಿತ್ತ ಬೀಸುತ್ತಾ, ಕುಣಿದಾಡಿದರು … ಉತ್ತರ ಕರ್ಣಾಟಕದಲ್ಲಿ ಜನರಿಗೆ ಹೆಸರು ಬಂತು!  ರುಚಿಯಾದ ಭೂಗೋಳಶಾಸ್ತ್ರವಿದು! ನಾಲಿಗೆ ಚಪ್ಪರಿಸಿ ನನ್ನೊಡನೆ ಹಾಡುತ್ತೀರ, ಕೊನೆಯಲ್ಲಿ. ಇದು ಖಾತ್ರಿ!

ಏನಾಯಿತು?

ಕ್ರಿಸ್ಟೊಫರ್ ಕೊಲಂಬಸ್ ೧೪೯೨ರಲ್ಲಿ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿಯುವುದಕ್ಕೆ ಹೊರಟ. ಜೊತೆಯಲ್ಲಿ ಹಲವಾರು ಮಂದಿಗಳು. ಹಲವು ಹಡಗುಗಳ ಗುಂಪು ಹೊರಟಿತು. ಅದೇನು ಭಾರತಕ್ಕೆ ಬರಲು ಅಷ್ಟು ಆಸೆ?

ಭಾರತದಿಂದ ಬಂದ ಮೆಣಸು, ಆಗಿನ ಕಾಲದ ಯುರೋಪಿನಲ್ಲಿ ಬಹಳ ಬೆಲೆಬಾಳುವ ಪದಾರ್ಥವಾಗಿತ್ತು. ಅದರ ರುಚಿ ಯುರೋಪಿನ ಶ್ರೀಮಂತರನ್ನು ಮೋಹಿಸಿತು. ಬಾಯಲ್ಲಿ ಜೊಲ್ಲು ಬರಿಸಿತು. ಎಲ್ಲರಿಗೂ ಬೇಕು. ಬೆಲೆ ಹೆಚ್ಚಿದ್ದರೂ ಪರವಾಗಿಲ್ಲ. ಕೊಂಡು ತಿನ್ನುತ್ತಿದ್ದರು. ಮಾರಾಟಗಾರರಿಗೆ ಲಾಭವೋ ಲಾಭ! ಸಪ್ಲೈ ಮಾಡುವವರು ಬೇಕಾಗಿತ್ತು. ಭಾರತಕ್ಕೆ ಕಡಲು ದಾರಿಯಲ್ಲಿ ಹೋಗಿ ಹೇರಳವಾಗಿ ಮೆಣಸನ್ನು (ಮತ್ತಿತರ ಸಾಂಬರ ಪದಾರ್ಥಗಳನ್ನೂ ಹಾಗೂ ಮುತ್ತು ರತ್ನಗಳನ್ನೂ) ತಂದವರಿಗೆ ಬೇಕಾದಷ್ಟು ಲಾಭ ಬರುವುದು. ಇದಕ್ಕಾಗಿ ಯುರೋಪಿನ ಹಲವಾರು ದೇಶದವರಿಗೆ ಭಾರತಕ್ಕೆ ಬರುವ ಹಂಬಲ. ಇದು ಒಂದು “ರೇಸ್” ಆಗಿಬಿಟ್ಟಿತು!

ಪಾಪ ಕೊಲಂಬಸನು ಭಾರತಕ್ಕೆ ಬರಲಿಲ್ಲ.

ಎಲ್ಲೆಲ್ಲೋ ಕಾಲಿಟ್ಟ.

ಕಾಲಿಟ್ಟ ಜಾಗಗಳನ್ನೆಲ್ಲಾ “ಇಂಡಿಯಾ” ಅಂದು ಬಿಟ್ಟ, ಅಲ್ಲಿದ್ದ ಜನರನ್ನೆಲ್ಲಾ “ಇಂಡಿಯೊ” ಅಂದು ಬಿಟ್ಟ. ಹೀಗೆ, ಈಗಿನ ಮೆಕ್ಸಿಕೊಗೆ ಅವನು ಮತ್ತು ಅವನ ಸಹಪ್ರಯಾಣಿಗಳೂ ಬಂದು ಸೇರಿದರು. ಸೇರಿ, ಇದು “ನೂತನ ಪ್ರಪಂಚ” ಎಂದರು. ತಪ್ಪು. ಅವರಿಗಿಂತ ಶತಮಾನಗಳ ಮುಂದಿನಿಂದಲೇ ಅಲ್ಲಿ ಜನ ಸಂಸ್ಕೃತಿ ಸ್ಥಾಪಿತವಾಗಿತ್ತು.

ನಮ್ಮ ಈ ನಾವಿಕ ಮಿತ್ರರು ಅಲ್ಲಿ ಏನೇನನ್ನೋ ಕಂಡು ಬೆರಗಾದರು. ಅವುಗಳಲ್ಲಿ, ಒಂದು ಕೆಂಪು ಬಣ್ಣದ ಹಣ್ಣು. ಸ್ಥಳೀಯರು ಅದನ್ನು ಅಡಿಗೆಯಲ್ಲಿ, ಯುಧ್ಧದಲ್ಲಿ, ಔಷಧಿಯಲ್ಲೂ ಉಪಯೋಗಿಸುತ್ತಿದ್ದರು. ಇದನ್ನು “ಚೀಲೆ” ಎನ್ನೂತ್ತಿದ್ದರು. (ಈಗ ಅದು ಇಂಗ್ಲೀಶನಲ್ಲಿ “ಚಿಲಿ”ಯಾಗಿಬಿಟ್ಟಿದೆ)

ಇದನ್ನು ರುಚಿ ನೋಡಲು ಬಾಯಲ್ಲಿ ಹಾಕಿ ಕಚ್ಚಿದರು. ಅಷ್ಟೇ! ಪ್ರಪಂಚವೇ ಕಕ್ಕಾಮಕ್ಕಿಯಾಗಿ ಬಿಟ್ಟಿತೋ ಅನ್ನುವ ಹಾಗಾಗಿ, ಅಯ್ಯೋ ಅಪ್ಪಾ ಅಂತ ಎಗರಾಡಿ ಕುಣಿದಾಡಿ ರಾದ್ದಾಂತವಾಗಿ ಬಿಟ್ಟಿತು!

ಇದುವರೆಗೂ ಇದಕ್ಕೆ ಹೋಲುವ ರುಚಿಯೆಂದರೆ ಇವರಿಗೆ ಗೊತ್ತಿದ್ದುದು ಮೆಣಸಿನದೊಂದೇ. ಇದನ್ನೂ ಒಂದು ತರಹದ ಮೆಣಸು ಎಂದು ಭಾವಿಸಿದರು.

ಹಾಗೂ ಹೀಗೂ ಸುಧಾರಿಸಿಕೊಂಡವರೇ ೧೪೯೩ರಲ್ಲಿ ಈ ಪ್ರಚಂಡರು ಆ ಹಣ್ಣಿನ ಬೀಜಗಳನ್ನು ಸ್ಪೈನ್ ದೇಶಕ್ಕೆ ತಂದು ಬಿತ್ತಿ, ಬೆಳೆದರು. ಯುರೋಪಿನಲ್ಲೆಲ್ಲಾ ಹರಡಿಬಿಟ್ಟಿತು ಈ ಗಿಡ.

ಇದೇ ಸುಮಾರು ಸಮಯದಲ್ಲಿ ಪೋರ್ಚುಗೀಸರು ಬ್ರೆಸಿಲ್-ನಿಂದ ಈ ಗಿಡವನ್ನು ಗೋವಾಗೆ ತಂದರಂತೆ. ಇಲ್ಲಿಯ ವಾತಾವರಣ, ಮಣ್ಣು ಎಲ್ಲವೂ ಈ ಗಿಡಕ್ಕೆ ಹೊಂದಿತ್ತು. ಚೆನ್ನಾಗಿ ಹರಡಿತು.

ಕೆಲವರ ಅಭಿಪ್ರಾಯದಂತೆ ಭಾರತದಿಂದ ಮಧ್ಯ ಏಶ್ಯಾ, ತುರ್ಕಿ ಇತ್ಯಾದಿ ದೇಶಗಳಿಗೆ ಹರಡಿತು ಎನ್ನುತ್ತಾರೆ.

೭,೫೦೦ ವರ್ಷಗಳ ಹಿಂದೆಯೇ, ದಕ್ಷಿಣ ಮತ್ತು ಮಧ್ಯ ಅಮೆರಿಕಾಗಳಲ್ಲಿ ಈ ಮೆಣಸಿನಕಾಯನ್ನ ಕಾಡುಗಳಲ್ಲಿ ಅಲ್ಲಿ ಇಲ್ಲಿ ಆಯ್ದು ತಿನ್ನುತ್ತಿದ್ದರೆಂದೂ, ಸುಮಾರು ೬,೦೦೦ ವರ್ಷಗಳ ಹಿಂದೆ ಇದನ್ನು ವ್ಯವಸಾಯಕ್ಕೆ ಅಳವಡಿಸಿಕೊಂಡು ಬೆಳೆಯುತ್ತಿದ್ದರೆಂದೂ ಕಂಡುಹಿಡಿಯಲಾಗಿದೆ. ಈಗ ಇದು ಪ್ರಪಂಚಾದ್ಯಂತ ಹರಡಿದೆ!

ಭಾರತಕ್ಕೆ ಬಂತೋ ನಾವೂ ಅದನ್ನು “ಮೆಣಸು” ಜೊತೆಗೆ ಹೋಲಿಸಿ “ಮೆಣಸಿನ ಕಾಯಿ” ಎಂದು ಹೆಸರಿಟ್ಟೆವು.

ಪ್ರಪಂಚದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ೧೦ ದೇಶಗಳು

ಅಲ್ಲಿಗೆ ಮುಗಿಯಿತೇ ಕಥೆ?

ಎಲ್ಲೆಲ್ಲೂ ಮೆಣಸಿನಕಾಯಿ ಬೆಳವಣಿಗೆ ಪ್ರಾರಂಭವಾಗಿಬಿಟ್ಟಿತು! ಭಾರತದ ಹಲವಾರು ರಾಜ್ಯಗಳಲ್ಲಿ (ನಕಾಶೆ ನೋಡಿ) ಇದನ್ನು ಈಗಲೂ ಬೆಳೆಸುತ್ತಾರೆ. ಪ್ರಪಂಚದಲ್ಲೇ ಅತಿ ಹೆಚ್ಚು ಪರದೇಶಗಳಿಗೆ ಮೆಣಸಿನ ಕಾಯಿಯ ಸರಬರಾಜು ಭಾರತದಿಂದಲೇ. (ಯಾವುದೇ ಚಿತ್ರವನ್ನು ಕ್ಲಿಕ್ ಮಾಡಿದರೆ ಹೊಸ ಪುಟದಲ್ಲಿ ದೊಡ್ಡದಾಗಿ ತೆರೆಯುತ್ತದೆ)

ಭಾರತದಲ್ಲಿ ಮೆಣಸಿನಕಾಯಿ ಬೆಳೆಯುವ ರಾಜ್ಯಗಳು

ಭಾರತದಲ್ಲಿ ಮೆಣಸಿನಕಾಯಿ ಉತ್ಪಾದಿಸುವ ರಾಜ್ಯಗಳು

ಇನ್ನೂ ಸ್ವಾರಸ್ಯ ಏನಂದರೆ, “ಯಾವ ಮೆಣಸಿನ ಕಾಯಿ ಅತಿ ಹೆಚ್ಚು ಖಾರ?” ಎನ್ನುವ ಪ್ರಶ್ನೆ!

ಇದನ್ನು ಬಹಳ ವರ್ಷ ಕಾಲ ಸುಮ್ಮನೆ ನಮ್ಮಪ್ಪ ದೊಡ್ಡಪ್ಪ ಅನ್ನುವ ರೀತಿಯಲ್ಲಿ ತಗಾದೆ ಮಾಡುತ್ತಿದ್ದರು ಜನರು. ಈಗ ಇದಕ್ಕೊಂದು ವೈಜ್ಞಾನಿಕ ರೀತಿಯಿಂದ ಅಳತೆ ಮಾಡುವ ವಿಧಾನವನ್ನು ಕಂಡು ಹಿಡಿದಿದ್ದಾರೆ.

ನೋಡಿ, ಮೆಣಸಿನಕಾಯಿಯಲ್ಲಿ ಖಾರ ಬರುವುದು ಕ್ಯಾಪ್ಸೈಸಿನ್ (capsaisin) ಎಂಬ ಒಂದು ರಸಾಯನ ವಸ್ತುವಿನಿಂದ. ಇದು ಗ್ರೀಕ್ ಭಾಷೆಯ “ಕಾಪ್ಸಿಮೊ” (ಅಂದರೆ “ಕಚ್ಚುವುದು”) ಎಂಬ ಪದದಿಂದ ಬಂದದ್ದು. ಮೆಣಸಿನ ಕಾಯನ್ನು ಕಚ್ಚಿದರೆ ಅದು ನಮ್ಮನ್ನೇ ಕಚ್ಚುತ್ತದೆ! ಸರಿಯಾಗಿಯೇ ಇದೆ ಹೆಸರು.

ಕ್ಯಾಪ್ಸೈಸಿನ್ ಹೆಚ್ಚಾದಷ್ಟೂ ಖಾರ ಹೆಚ್ಚು. ಈ ಖಾರವನ್ನ ಅಳತೆಮಾಡಲು ಸ್ಕೋವಿಲ್ ಹೀಟ್ ಯೂನಿಟ್ (Scoville Heat Units ಅಥವಾ SHU)-ಅನ್ನು ಉಪಯೋಗಿಸುತ್ತಾರೆ. SHU ಮೌಲ್ಯ ಹೆಚ್ಚಾದಷ್ಟೂ ಖಾರ ಹೆಚ್ಚು. ಪರಿಶುಧ್ಧವಾದ ಕ್ಯಾಪ್ಸೈಸಿನ್-ಇನ ಮೌಲ್ಯ 1,60,00,000 SHU! ಸಾಕೇನು ಖಾರಾ?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು! (ಭೋತ್ ಮೆಣಸಿನ ಕಾಯಿ)

ಹಲವು ವಿಧವಾದ ಮೆಣಸಿನಕಾಯಿಗಳ SHU ಮೌಲ್ಯಗಳನ್ನು ಹೋಲಿಸಿ ನೋಡಿದರೆ:

ಎಲ್ಲವೂ ಭಾರತದ ಈಶಾನ್ಯ ರಾಜ್ಯಗಳಿಂದ ಬರುವವು!

ಆದರೆ ಅತಿ ರುಚಿಯಾದದ್ದು . . . ಭೂಗೋಳಶಾಸ್ತ್ರ ಕಣ್ರಿ — ೧೦,೦೦,೦೦,೦೦,೦೦೦ SHU!

(ಉತ್ತರ ಕರ್ಣಾಟಕದ ಸಂಬಂಧ? ಹಲವಾರು ಜನರ ಹೆಸರಿನಲ್ಲಿ “ಮೆಣಸಿನಕಾಯಿ” ಎಂದಿರುವುದುಂಟು.)

“ಒಳಗೆ ಬರೋದಿಕ್ಕೆ ಭಯ ಆಗತ್ತೆ ರೀ!”

ಸ್ವಲ್ಪ ಮೆಣಸಿನ ಕಾಯಿ ತಿನ್ನಿ!

ಮೆಣಸಿನ ಕಾಯಿ ಮಹಿಮೆ

ಮುಂದಕ್ಕೆ ಕಲಿಯಿರಿ:

 • ದೇಶಗಳ ಗಡಿಗಳಿರುವ ಕೆಲವು  ಖಾಲಿ ವಿಶ್ವ ನಕಾಶೆಗಳನ್ನು ಕೊಳ್ಳಿರಿ (ಸಾಮಾನ್ಯವಾಗಿ ಪಠ್ಯಪುಸ್ತಕ ಮಾರಾಟಗಾರ ಬಳಿ ಸಿಗುತ್ತವೆ)
  • ಒಂದರ ಮೇಲೆ ಪ್ರಪಂಚದಲ್ಲಿ ಮೆಣಸಿನ ಕಾಯಿ ಉತ್ಪಾದಿಸುವ ಎಲ್ಲಾ ದೇಶಗಳನ್ನೂ ಗುರುತಿಸಿ.
  • ಒಂದರ ಮೇಲೆ ಪ್ರಪಂಚದ ೧೦ ಹೆಚ್ಚು ಮೆಣಸಿನ ಕಾಯಿ ಉತ್ಪಾದಿಸುವ ದೇಶಗಳನ್ನು ಮಾತ್ರ ಗುರುತಿಸಿ.
  • ಇನ್ನೊಂದರ ಮೇಲೆ ಆ ಎರಡೂ ಮಾಹಿತಿಗಳನ್ನೂ ಗುರುತಿಸಿ.
 • ಮೆಣಸಿನಕಾಯಿ ಎಲ್ಲಿಂದ ಹೊರಟು ಎಲ್ಲೆಲ್ಲಾ ಹೋಯಿತು ಅನ್ನುವುದನ್ನು ದಿಕ್ಸೂಚಕ ರೇಖೆಗಳನ್ನು ಬರೆದು, ದೇಶಗಳ ಹೆಸರುಗಳನ್ನೂ ಬರೆದು ನೋಡಿ.
 • ಕರ್ಣಾಟಕದಲ್ಲಿ ಬೆಳೆಯುವ ವಿವಿಧ ಮೆಣಸಿನಕಾಯಿಗಳ ಹೆಸರುಗಳನ್ನೂ, ಅಚು ಸಾಮಾನ್ಯವಾಗಿ ಬೆಳೆಯುವ ಜಿಲ್ಲೆಗಳನ್ನೂ ಕರ್ಣಾಟಕದ ಒಂದು ನಕಾಶೆಯ ಮೇಲೆ ಗುರುತಿಸಿ. (ಕರ್ಣಾಟಕದ ಜಿಲ್ಲೆಗಳನ್ನು ತೋರಿಸುವ ಖಾಲಿ ನಕಾಶೆಗಳೂ ಸಾಮಾನ್ಯವಾಗಿ ಪಠ್ಯಪುಸ್ತಕ ಮಾರಾಟಗಾರ ಬಳಿ ಸಿಗುತ್ತವೆ)
 • ಮೆಣಸಿನ ಕಾಯಿಗೆ ಸಂಬಂಧಿಸಿದಂತೆ ಗಾದೆಗಳು ಯಾವುದಾದರೂ ಇವೆಯೇ? ವಿಚಾರಿಸಿ ತಿಳಿದುಕೊಂಡು, ಈ ಈ-ಮೇಲ್ ವಿಳಾಸಕ್ಕೆ ಕಳುಹಿಸಿ geo@tiigs.org
 • “ವಹವಾರೆ ಮೆಣಸಿನ ಕಾಯಿ” ಎಂಬ ಹಾಡೊಂದು ಇದೆ. ಇದನ್ನು ಪುರಂದರದಾಸರು ಬರೆದರು ಎನ್ನುತ್ತಾರೆ, ಆದರೆ ಅದು ಖಾತ್ರಿಯಲ್ಲ. ಹಾಡಂತೂ ವಿನೋದವಾಗಿದೆ. ಮಜವಾದ ರೀತಿಯಲ್ಲಿ ಆ ಹಾಡನ್ನು ಹಾಡಲು ಕಲಿಯಿರಿ — ನಿಮಗಿಷ್ಟ ಬಂದಂತೆ ಅದಕ್ಕೆ ರಾಗ ಮತ್ತು ತಾಳ ಸಂಯೋಜಿಸ ಬಹುದು. ನಿಮ್ಮ ಶಾಲೆಯಲ್ಲಿ ಇದರ ಸ್ಪರ್ಧೆಯನ್ನು ನಡೆಸಿ. ಆದರೆ ಮೆಣಸಿನಕಾಯಿಯ ಭೌಗೋಳಿಕ ಹಾವು ಚಾರಿತ್ರಕ ವಿವರಗಳನ್ನು ಮೊದಲು ಹಂಚಿಕೊಳ್ಳಿ. ಆಗ ಹಾಡಿನ ಸ್ಚಾರಸ್ಯವೂ ಹೆಚ್ಚುತ್ತದೆ!

ಮೂಲಗಳು:

 

Categories:

No responses yet

Share your thoughts

%d